ವಿಶ್ವಕಪ್​ಗೆ ಮುನ್ನ ವಿಶ್ವ ನಂ. 1 ಪಟ್ಟಕ್ಕೆ ತ್ರಿಕೋನ ಸ್ಪರ್ಧೆ; ರೇಸ್​ನಲ್ಲಿವೆ ಭಾರತ, ಪಾಕ್​, ಆಸೀಸ್​

no. 1 race web
Published on

ನವದೆಹಲಿ: ಏಕದಿನ ಕ್ರಿಕೆಟ್​ನ ವಿಶ್ವ ಚಾಂಪಿಯನ್​ ತಂಡವನ್ನು ನಿರ್ಧರಿಸಲು ಭಾರತದಲ್ಲಿ ಅಕ್ಟೋಬರ್​ 5ರಿಂದ 13ನೇ ಆವೃತ್ತಿಯ ವಿಶ್ವಕಪ್​ ಟೂರ್ನಿ ನಿಗದಿಯಾಗಿದೆ. ಅದಕ್ಕೆ ಮುನ್ನ, ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ನಂ. 1 ತಂಡವಾಗಿ ಕಣಕ್ಕಿಳಿಯಲು ಮೂರು ತಂಡಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಆತಿಥೇಯ ಭಾರತ, ನೆರೆರಾಷ್ಟ್ರ ಪಾಕಿಸ್ತಾನ ಮತ್ತು 5 ಬಾರಿಯ ವಿಶ್ವ ಚಾಂಪಿಯನ್​ ಆಸ್ಟ್ರೆಲಿಯಾ ತಂಡಗಳು ಈ ತ್ರಿಕೋನ ಸ್ಪರ್ಧೆಯಲ್ಲಿವೆ.

ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ಪ್ರಸಕ್ತ ಪಾಕಿಸ್ತಾನ 119 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಆಸೀಸ್​ 118 ಅಂಕಗಳೊಂದಿಗೆ ಎರಡು ಮತ್ತು ಭಾರತ 114 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿವೆ. ಇದೀಗ ಭಾರತ, ಪಾಕ್​ ಏಷ್ಯಾಕಪ್​ನಲ್ಲಿ ಆಡುತ್ತಿದ್ದರೆ, ಆಸೀಸ್​ ತಂಡ ದಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ನಂತರ ಭಾರತ-ಆಸೀಸ್​ ನಡುವೆಯೂ ಏಕದಿನ ಸರಣಿ ನಡೆಯಲಿದೆ. ಈ ಟೂರ್ನಿ/ಸರಣಿಗಳ ಫಲಿತಾಂಶವು ವಿಶ್ವಕಪ್​ನಲ್ಲಿ ಯಾರು ನಂ. 1 ಪಟ್ಟದೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ನಿರ್ಧರಿಸಲಿದೆ.

ಪಾಕಿಸ್ತಾನಕ್ಕೆ ಪಟ್ಟ ಕಾಯುವ ಒತ್ತಡ

ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಕ್ಲೀನ್​ಸ್ವೀಪ್​ ಮಾಡುವ ಮೂಲಕ ವಿಶ್ವ ನಂ. 1 ಪಟ್ಟ ಒಲಿಸಿಕೊಂಡಿರುವ ಪಾಕ್​ಗೆ ಈಗ ಇದನ್ನು ಕಾಯ್ದುಕೊಳ್ಳಲು ಗೆಲುವು ಅನಿವಾರ್ಯ. ಇಲ್ಲದಿದ್ದರೆ ಪಾಕ್​ ಸೋಲಿನಿಂದ ಆಸೀಸ್​ ಲಾಭ ಪಡೆಯಲಿದೆ. ಏಷ್ಯಾಕಪ್​ನಲ್ಲಿ ಇನ್ನು ಉಳಿದಿರುವ ಭಾರತ, ಶ್ರೀಲಂಕಾ ವಿರುದ್ಧದ ಸೂಪರ್-4 ಪಂದ್ಯಗಳು ಮತ್ತು ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆದ್ದರೆ ನಂ. 1 ಪಟ್ಟವನ್ನು ಭದ್ರಪಡಿಸಿಕೊಳ್ಳಬಹುದು. ಆಗ ಆಸೀಸ್​ ತಂಡ ದಕ್ಷಿಣ ಆಫ್ರಿಕಾ ಮತ್ತು ಭಾರತ ವಿರುದ್ಧದ ಏಕದಿನ ಸರಣಿಗಳನ್ನು ಗೆದ್ದುಕೊಂಡರೂ, ಪಾಕ್​ ಪಟ್ಟವನ್ನು ಅಲುಗಾಡಿಸಲು ಸಾಧ್ಯವಾಗದು.

ಆಸೀಸ್​ ಲೆಕ್ಕಾಚಾರ

ಆಸ್ಟ್ರೆಲಿಯಾಕ್ಕೆ ನಂ. 1 ಪಟ್ಟಕ್ಕೇರಲು ಗೆಲುವಿನ ಜತೆಗೆ ಪಾಕಿಸ್ತಾನದ ಸೋಲು ಕೂಡ ಅಗತ್ಯವಾಗಿದೆ. ಏಷ್ಯಾಕಪ್​ನಲ್ಲಿ ಪಾಕಿಸ್ತಾನ ತಂಡ ಇನ್ನು ಒಂದು ಪಂದ್ಯವನ್ನು ಸೋತರೂ, ಆಸ್ಟ್ರೆಲಿಯಾ ತಂಡ ದಕ್ಷಿಣ ಆಫ್ರಿಕಾ ಮತ್ತು ಭಾರತ ವಿರುದ್ಧದ ಏಕದಿನ ಸರಣಿಗಳನ್ನು ಗೆದ್ದುಕೊಳ್ಳುವ ಮೂಲಕ ವಿಶ್ವ ನಂ. 1 ಪಟ್ಟಕ್ಕೆ ಮರಳಬಹುದಾಗಿದೆ. ಆದರೆ ಎರಡರಲ್ಲಿ ಒಂದು ಸರಣಿ ಸೋತರೂ ಆಸ್ಟ್ರೆಲಿಯಾಕ್ಕೆ ನಂ. 1 ಪಟ್ಟ ಒಲಿಸಿಕೊಳ್ಳುವುದು ಕಷ್ಟವಾಗಲಿದೆ.

ಭಾರತಕ್ಕೆ ಕಠಿಣ ಹಾದಿ

ಪಾಕಿಸ್ತಾನ ಮತ್ತು ಆಸ್ಟ್ರೆಲಿಯಾ ತಂಡಗಳಿಗೆ ಹೋಲಿಸಿದರೆ ಭಾರತ ತಂಡ, ತವರಿನ ವಿಶ್ವಕಪ್​ನಲ್ಲಿ ವಿಶ್ವ ನಂ. 1 ತಂಡವಾಗಿ ಕಣಕ್ಕಿಳಿಯಲು ಸ್ವಲ್ಪ ಹೆಚ್ಚು ಶ್ರಮಪಡಬೇಕಾಗುತ್ತದೆ ಮತ್ತು ಅನುಕೂಲಕರ ಫಲಿತಾಂಶದೊಂದಿಗೆ ಅದೃಷ್ಟದ ನೆರವು ಕೂಡ ಬೇಕಾಗುತ್ತದೆ. ಭಾರತ ತಂಡ ಏಷ್ಯಾಕಪ್​ನಲ್ಲಿ ಉಳಿದೆಲ್ಲ ಪಂದ್ಯ ಮತ್ತು ಆಸೀಸ್​ ವಿರುದ್ಧದ ಸರಣಿ ಗೆದ್ದು ನಂ.1 ಪಟ್ಟಕ್ಕೇರಬಹುದಾಗಿದೆ. ಆದರೆ ಇದೇ ವೇಳೆ ಪಾಕಿಸ್ತಾನ ತಂಡ ಏಷ್ಯಾಕಪ್​ನಲ್ಲಿ ಸೂಪರ್​-4ರ ತನ್ನ ಉಳಿದೆರಡೂ ಪಂದ್ಯ ಸೋಲಬೇಕು ಮತ್ತು ಆಸೀಸ್​ ತಂಡ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 3ಕ್ಕಿಂತ ಹೆಚ್ಚು ಪಂದ್ಯ ಗೆಲ್ಲಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net