

ಆಕ್ಲೆಂಡ್: ಟಿ-20 ಸರಣಿ ಗೆದ್ದು ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ, ಇದೀಗ ಮೊದಲು ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ಗೆ 307ರನ್ಗಳ ದೊಡ್ಡ ಮೊತ್ತದ ಟಾರ್ಗೆಟ್ ನೀಡಿದೆ. ನಾಯಕ ಶಿಖರ್ ಧವನ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಅವರ ಅರ್ಧಶತಕ ಹಾಗೂ ವಾಷಿಂಗ್ಟನ್ ಸುಂದರ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸಂಪೂರ್ಣ ಯುವ ಆಟಗಾರರೇ ಆಡುತ್ತಿದ್ದು, ಅನುಭವಿ ಶಿಖರ್ ಧವನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಮೊದಲ ಪಂದ್ಯದ ಮೂಲಕ ಯುವ ವೇಗಿಗಳಾದ ಉಮ್ರಾನ್ ಮಲಿಕ್ ಹಾಗೂ ಅರ್ಶ್ದೀಪ್ ಸಿಂಗ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಅವಕಾಶ ಪಡೆದುಕೊಂಡರು.
ಬಹುದಿನಗಳ ನಂತರ ಏಕದಿನ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿರುವ ಶಿಖರ್ ಧವನ್ ಹೊಸ ದಾಖಲೆಯೊಂದನ್ನು ಬರೆದರು. ಇನ್ನಿಂಗ್ಸ್ ಆರಂಭಿಸಿದ ಧವನ್, ಅರ್ಧಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಲೀಸ್ಟ್ ಎ ಕ್ರಿಕೆಟ್‌ನಲ್ಲಿ 12,000 ರನ್ ಕಲೆ ಹಾಕಿ ದಾಖಲೆ ಬರೆದರು. (ಏಜೆನ್ಸೀಸ್)