ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಯನ್ನು ಯಾವ ಚಾನಲ್‌ನಲ್ಲಿ ನೋಡಬಹುದು ಗೊತ್ತೇ?

india vs australia web
Published on

ಬೆಂಗಳೂರು: ಮಾರ್ಚ್‌ನಲ್ಲಿ ವಿಶ್ವದೆಲ್ಲೆಡೆ ಕರೊನಾ ವೈರಸ್ ಹಾವಳಿ ಶುರುವಾದ ಬಳಿಕ ಕ್ರಿಕೆಟ್ ಜಗತ್ತು ಸಂಪೂರ್ಣ ಸ್ತಬ್ಧಗೊಂಡಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ಐಪಿಎಲ್ 13ನೇ ಆವೃತ್ತಿಯೊಂದಿಗೆ ಭಾರತೀಯ ಕ್ರಿಕೆಟ್ ಲೋಕ ಪುನರಾರಂಭ ಕಂಡಿತ್ತು. ಅರಬ್ ರಾಷ್ಟ್ರದ ಬಯೋ-ಬಬಲ್‌ನಲ್ಲಿ ನಡೆದ ಐಪಿಎಲ್ ಟೂರ್ನಿಯ ಯಶಸ್ಸಿನ ಬಳಿಕ ಇದೀಗ ಟೀಮ್ ಇಂಡಿಯಾ, ಕರೊನಾ ಕಾಲದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗೆ ಸಜ್ಜಾಗಿದೆ.

ಎರಡು ತಿಂಗಳ ಸುದೀರ್ಘ ಪ್ರವಾಸಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿರುವ ಭಾರತ ತಂಡ ನವೆಂಬರ್ 27ರಿಂದ ಏಕದಿನ ಸರಣಿಯಲ್ಲಿ ಆಡಲಿದೆ. ಪ್ರವಾಸದಲ್ಲಿ ತಲಾ 3 ಏಕದಿನ, ಟಿ20 ಮತ್ತು 4 ಟೆಸ್ಟ್ ಪಂದ್ಯಗಳನ್ನು ಭಾರತ ತಂಡ ಆಡಲಿದೆ. 2 ವರ್ಷಗಳ ಹಿಂದೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೀಗ ಅದೇ ಸಾಧನೆಯನ್ನು ಮರುಕಳಿಸುವ ಹಂಬಲದೊಂದಿಗೆ ಭಾರತ ತಂಡ ಆಸ್ಟ್ರೇಲಿಯಾಕ್ಕೆ ತೆರಳಿದೆ.

ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಳೆದ ಎರಡು ತಿಂಗಳಿನಿಂದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲೇ ಐಪಿಎಲ್ ಹಬ್ಬವನ್ನು ಸವಿದಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಟಿವಿ ರಿಮೋಟ್‌ನಲ್ಲಿ ಚಾನಲ್ ಬದಲಾಯಿಸಬೇಕಾಗಿದ್ದು, ಸೋನಿ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ಪಂದ್ಯಗಳನ್ನು ಸವಿಯಬಹುದಾಗಿದೆ.

ಭಾರತ-ಆಸ್ಟ್ರೇಲಿಯಾ ನಡುವಿನ ತಲಾ 3 ಏಕದಿನ, ಟಿ20 ಮತ್ತು 4 ಪಂದ್ಯಗಳ ಟೆಸ್ಟ್ ಸರಣಿಯ ಪಂದ್ಯಗಳನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು, ಸೋನಿ ಸಿಕ್ಸ್, ಸೋನಿ ಟೆನ್3, ಸೋನಿ ಟೆನ್2 ಮತ್ತು ಸೋನಿ ಟೆನ್1 ಚಾನಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಟಿ20, ಏಕದಿನ ಸರಣಿಯ ಪಂದ್ಯಗಳು ದೂರದರ್ಶನ ಅಥವಾ ಡಿಡಿ ಸ್ಪೋರ್ಟ್ಸ್‌ನಲ್ಲೂ ನೇರಪ್ರಸಾರ ಕಾಣುವ ನಿರೀಕ್ಷೆ ಇದೆ.

ಭಾರತ ತಂಡದ ಆಸೀಸ್ ಪ್ರವಾಸ ವೇಳಾಪಟ್ಟಿ:

ದಿನಾಂಕ: ಪಂದ್ಯ: ಸ್ಥಳ (ಆರಂಭ)

ನವೆಂಬರ್ 27: ಮೊದಲ ಏಕದಿನ*: ಸಿಡ್ನಿ (ಬೆಳಗ್ಗೆ 9.10)

ನವೆಂಬರ್ 29: ಎರಡನೇ ಏಕದಿನ*: ಸಿಡ್ನಿ (ಬೆಳಗ್ಗೆ 9.10)

ಡಿಸೆಂಬರ್ 2: ಮೂರನೇ ಏಕದಿನ*: ಕ್ಯಾನ್‌ಬೆರಾ (ಬೆಳಗ್ಗೆ 9.10)

ಡಿಸೆಂಬರ್ 4: ಮೊದಲ ಟಿ20*: ಕ್ಯಾನ್‌ಬೆರಾ (ಮಧ್ಯಾಹ್ನ 1.40)

ಡಿಸೆಂಬರ್ 6: ಎರಡನೇ ಟಿ20*: ಸಿಡ್ನಿ (ಮಧ್ಯಾಹ್ನ 1.40)

ಡಿಸೆಂಬರ್ 8: ಮೂರನೇ ಟಿ20*: ಸಿಡ್ನಿ (ಮಧ್ಯಾಹ್ನ 1.40)

ಡಿಸೆಂಬರ್ 17-21: ಮೊದಲ ಟೆಸ್ಟ್*: ಅಡಿಲೇಡ್ (ಬೆಳಗ್ಗೆ 9.30)

ಡಿಸೆಂಬರ್ 26-30: ಎರಡನೇ ಟೆಸ್ಟ್: ಮೆಲ್ಬೋರ್ನ್ (ಬೆಳಗ್ಗೆ 5)

ಜನವರಿ 7-11: ಮೂರನೇ ಟೆಸ್ಟ್: ಸಿಡ್ನಿ (ಬೆಳಗ್ಗೆ 5)

ಜನವರಿ 15-19: ನಾಲ್ಕನೇ ಟೆಸ್ಟ್: ಬ್ರಿಸ್ಬೇನ್ (ಬೆಳಗ್ಗೆ 5)

*ಅಹರ್ನಿಶಿ ಪಂದ್ಯಗಳು. ಸಮಯ: ಭಾರತೀಯ ಕಾಲಮಾನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net