More

    ಮೊದಲ ಏಕದಿನ ಪಂದ್ಯದ ಸೋಲಿನ ಕಹಿ: 2ನೇ ಪಂದ್ಯದಲ್ಲಿ ಆಸಿಸ್​ ಪಡೆಗೆ ಸವಾಲಿನ ಗುರಿ ನೀಡಿದ ಭಾರತ

    ರಾಜ್​ಕೋಟ್​: ಶಿಖರ್​ ಧವನ್​(96) ಹಾಗೂ ಕನ್ನಡಿಗ ಕೆ.ಎಲ್​.ರಾಹುಲ್​(80) ಅವರ ಅಮೋಘ ಬ್ಯಾಟಿಂಗ್​ ನೆರವಿನಿಂದ ಆತಿಥೇಯ ಭಾರತ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 341 ರನ್ ಸವಾಲಿನ​ ಗುರಿ ನೀಡಿದೆ.

    ಸೌರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ ಪರ ರೋಹಿತ್​ ಶರ್ಮಾ ಮತ್ತು ಶಿಖರ್​ ಧವನ್​ 81 ರನ್​ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ವೇಳೆ 42 ರನ್​ ಗಳಿಸಿ ನಿಧಾನಗತಿ ಬ್ಯಾಟ್​ ಬೀಸುತ್ತಿದ್ದ ರೋಹಿತ್​ ಎಲ್​ಬಿ ಬಲೆಗೆ ಬಿದ್ದರು. ಬಳಿಕ ಧವನ್​ ಜತೆಗೂಡಿದ ನಾಯಕ ವಿರಾಟ್​ ಕೊಹ್ಲಿ ಕೂಡ ಒಳ್ಳೆಯ ಜತೆಯಾಟವಾಡಿದರು. ತಂಡದ ಮೊತ್ತ 184 ರನ್​ ಆಗಿದ್ದಾಗ 96 ರನ್​ ಗಳಿಸಿದ್ದ ಧವನ್ ಸ್ಫೋಟಕ ಹೊಡೆತಕ್ಕೆ ಕೈಹಾಕಿ ಕ್ಯಾಚಿತ್ತು ಶತಕ ವಂಚಿತರಾದರು. ಇದರ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ ಕೂಡ್​(7) ಪೆವಲಿಯನ್​ಗೆ ಮರಳಿದರು.

    ಇತ್ತ ಒಳ್ಳೆಯ ಮೊತ್ತ ಕಲೆಹಾಕುತ್ತಿದ್ದ ವಿರಾಟ್​ ಕೊಹ್ಲಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿ 78 ರನ್​ ಗಳಿಸಿ ಔಟಾದರು. ಇದರ ಬೆನ್ನಲ್ಲೇ ಮನಿಶ್​ ಪಾಂಡೆ(2) ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೇ ಬಂದಷ್ಟೇ ವೇಗವಾಗಿ ಪೆವಲಿಯನ್​ ಸೇರಿದರು.

    ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದಿದ್ದ ಕನ್ನಡಿಗ ಕೆ.ಎಲ್​.ರಾಹುಲ್​ ಟೀಮ್ ಇಂಡಿಯಾಗೆ ಕೊನೆಯವರೆಗೂ ಆಸರೆಯಾಗಿ ನಿಂತರು. ಕೇವಲ 52 ಎಸೆತ ಎದುರಿಸಿದ ರಾಹುಲ್​ 6 ಬೌಂಡರಿ ಮತ್ತು ಮೂರು ಸಿಕ್ಸರ್​ ಒಳಗೊಂಡ ಸ್ಫೋಟಕ 80 ರನ್​ಗಳಿಸಿ ಅಜೇಯರಾಗಿ ಉಳಿದರು. ರವೀಂದ್ರ ಜಡೇಜಾ 20 ರನ್​ ಗಳಿಸಿದರೆ, ಮಹಮ್ಮದ್​ ಶಮಿ 1 ರನ್​ ಗಳಿಸಿ ಅಜೇಯರಾಗಿ ಉಳಿದರು.

    ಅಂತಿಮವಾಗಿ ಟೀಮ್​ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 340 ರನ್​ ಕಲೆಹಾಕಿತು. ಆಸಿಸ್​ ಪರ ಉತ್ತಮ ಬೌಲಿಂಗ್​ ದಾಲಿ ಮಾಡಿದ ಆ್ಯಡಮ್​ ಝಂಪಾ 3 ವಿಕೆಟ್​ ಕಬಳಿಸಿದರೆ, ಕೇನ್​ ರಿಚರ್ಡ್ಸನ್​ 2 ವಿಕೆಟ್​ ಪಡೆದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts