

Indian Embassy in China: ಭಾರತ ಮತ್ತು ಚೀನಾ ತಮ್ಮ ಸಂಬಂಧವನ್ನು ಸರಿಪಡಿಸಲು ಶ್ರಮಿಸುತ್ತಿರುವ ಸಂದರ್ಭದಲ್ಲಿ, ಭಾರತ ಸರ್ಕಾರವು ಚೀನಾದ ಪ್ರವಾಸಿಗಳಿಗೆ ವೀಸಾ ಪುನರಾರಂಭಿಸುವತ್ತ ಕೆಲಸ ಮಾಡುತ್ತಿದೆ ಎಂದು ವರದಿಗಳಾಗಿವೆ. ಈ ಮೂಲಕ ಭಾರತವು ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ಚೀನಾ ನಾಗರಿಕರಿಗೆ ಪ್ರವಾಸಿ ವೀಸಾ ನೀಡಲಿದೆ.
ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವೈಬೊದಲ್ಲಿ ಮಾಡಿದ ಪೋಸ್ಟ್ನ್ನು ಚೀನಾದ ಮಾಧ್ಯಮ 'ದಿ ಗ್ಲೋಬಲ್ ಟೈಮ್ಸ್' ಹಂಚಿಕೊಂಡಿದ್ದು, 2025ರ ಜುಲೈ 24ರಿಂದ ಚೀನಾದ ನಾಗರಿಕರು ಭಾರತಕ್ಕೆ ಭೇಟಿ ನೀಡಲು ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಮೊದಲು ವೆಬ್ ಲಿಂಕ್ ಆದ ಆನ್ಲೈನ್ನಲ್ಲಿ ವೀಸಾ ಅರ್ಜಿ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ, ಅದನ್ನು ಪ್ರಿಂಟ್ ತೆಗೆದುಕೊಳ್ಳಬೇಕು. ನಂತರ ವೆಬ್ ಲಿಂಕ್ನಲ್ಲಿ ಅಪಾಯಿಂಟ್ಮೆಂಟ್ ಪಡೆಯಬೇಕು. ಚೀನಾದ ನಾಗರಿಕರು ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಲು ಪಾಸ್ಪೋರ್ಟ್, ವೀಸಾ ಅರ್ಜಿ ನಮೂನೆ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ತಗೆದುಕೊಂಡ ಬರಬೇಕು ಎಂದು ಭಾರತೀಯ ರಾಯಭಾರ ಕಚೇರಿ ಹೊರಡಿಸಿದ ಪೋಸ್ಟ್ನಲ್ಲಿ ತಿಳಿಸಲಾಗಿದೆ.
2020 ರಲ್ಲಿ, ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಭಾರತವು ಎಲ್ಲಾ ಪ್ರವಾಸಿ ವೀಸಾಗಳನ್ನು ಸ್ಥಗಿತಗೊಳಿಸಿತ್ತು. 2022ರ ಏಪ್ರಿಲ್ನಲ್ಲಿ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘ (IATA) ಚೀನೀ ಪ್ರಜೆಗಳಿಗೆ ಎಲ್ಲಾ ಪ್ರವಾಸಿ ವೀಸಾಗಳು ಇನ್ನೂ ಮುಂದೆ ಮಾನ್ಯವಾಗಿರುವುದಿಲ್ಲ ಎಂದು ಹೇಳಿತ್ತು. ಕೋವಿಡ್ ನಂತರ ಚೀನಾವು 22.000 ಸಾವಿರ ಭಾರತೀಯ ವಿದ್ಯಾರ್ಥಿಗಳ ಮರು ಪ್ರವೇಶವನ್ನು ಸೀಮಿತಗೊಳಿಸಿದ ಬೆನ್ನಲ್ಲೇ ಭಾರತ ಈ ನಿರ್ಧಾರ ತೆಗೆದುಕೊಂಡಿದೆ.
ಈ ವರ್ಷದ ಆರಂಭದಲ್ಲಿ, ಪೂರ್ವ ಲಡಾಖ್ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ನಿಂದ ಎರಡೂ ದೇಶಗಳು ತಮ್ಮ ಸೈನ್ಯವನ್ನು ಹಿಂತೆಗೆದುಕೊಂಡ ನಂತರ ಭಾರತ ಮತ್ತು ಚೀನಾ ತಮ್ಮ ಸಂಬಂಧಗಳಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದವು.
ಉಭಯ ದೇಶಗಳು 2025ರ ಜನವರಿಯಲ್ಲಿ ಬೀಜಿಂಗ್ ಮತ್ತು ನವದೆಹಲಿ ನಡುವೆ ನೇರ ವಾಣಿಜ್ಯ ವಿಮಾನಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದವು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರ ಚೀನಾ ಭೇಟಿಯ ನಂತರ ಈ ಬೆಳವಣಿಗೆ ಕಂಡಿತ್ತು. ಈ ಭೇಟಿಯ ಸಮಯದಲ್ಲಿ, ಭಾರತ ಮತ್ತು ಚೀನಾ ಈ ವರ್ಷ ಭಾರತೀಯ ಯಾತ್ರಿಕರಿಗಾಗಿ ಪಶ್ಚಿಮ ಟಿಬೆಟ್ನಲ್ಲಿರುವ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ಒಪ್ಪಿಕೊಂಡಿತು.
ಇತ್ತೀಚಿಗೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಶಾಂಘೈ ಸಹಕಾರ ಸಂಸ್ಥೆ (SCO) ವಿದೇಶಾಂಗ ಸಚಿವರ ಸಭೆಗಾಗಿ ಚೀನಾಕ್ಕೆ ಭೇಟಿ ನೀಡಿದ್ದರು.