ಪಾಕ್‌ ಪ್ರಜೆಗಳನ್ನು ಸುರಕ್ಷಿತವಾಗಿ ಮರಳಿಸಲು ಭಾರತದ ಸಿದ್ಧತೆ: ಪಾಕಿಸ್ತಾನದ ದುಷ್ಟಬುದ್ಧಿಯ ನಡುವೆಯೂ ಭಾರತದ ಕಳಕಳಿ

PAK-return
Published on

ನವದೆಹಲಿ: ಕರೊನಾ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನವು ಹೊಸ ಹೊಸ ಉಗ್ರರ ಸಂಘಟನೆಗಳನ್ನು ಸ್ಥಾಪಿಸುವಲ್ಲಿ ನಿರತವಾಗಿದ್ದರೆ, ಇತ್ತ ಭಾರತವು ವಿವಿಧ ಕಾರಣಗಳಿಂದ ಭಾರತದಲ್ಲಿ ಸಿಲುಕಿರುವ ಪಾಕಿಸ್ತಾನದ ಪ್ರಜೆಗಳನ್ನು ಲಾಕ್‌ಡೌನ್‌ ನಡುವೆಯೂ ಮಾನವೀಯ ಕಾರಣಗಳಿಂದ ವಾಪಸ್‌ ಕಳುಹಿಸಲು ಸಿದ್ಧತೆ ನಡೆಸಿದೆ.
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ಮುಚ್ವಲಾಗಿದೆ. ಆದ್ದರಿಂದ ಪಾಕಿಸ್ತಾನಿಗಳು ಭಾರತದಲ್ಲಿಯೇ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸುರಕ್ಷಿತವಾಗಿ ವಾಪಸ್‌ ಕಳುಹಿಸಲು ಭಾರತದ ವಿದೇಶಾಂಗ ಸಚಿವಾಲಯವು ಕಾರ್ಯನಿರತವಾಗಿದೆ.
ಭಾರತಕ್ಕೆ ವಿವಿಧ ಉದ್ದೇಶಗಳಿಂದ ಪಾಕಿಸ್ತಾನಿಗಳು ಇಲ್ಲಿ ಸಿಲುಕಿರುವ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ತಿಳಿಸಿದ ಬೆನ್ನಲ್ಲೇ ಭಾರತವು ಅವರ ವಾಪಸಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. ಅದೇ ರೀತಿ, ಪಾಕಿಸ್ತಾನಕ್ಕೆ ಕಲಿಯಲು ಹೋಗಿರುವ ಭಾರತದ ವಿದ್ಯಾರ್ಥಿಗಳು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ವಾಪಸ್‌ ತರಲು ಕೂಡ ಭಾರತ ಎಲ್ಲಾ ರೀತಿಯ ತಯಾರಿ ನಡೆಸಿದೆ. ಈ ಸಂಬಂಧ ಈಗಾಗಲೇ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಜತೆ ಚರ್ಚಿಸಿರುವ ಭಾರತ ಸರ್ಕಾರ, ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕಳುಹಿಸಿಕೊಡುವಂತೆ ಮನವಿ ಮಾಡಿದೆ.
‘ಅನೇಕ ಪಾಕಿಸ್ತಾನಿಗಳು ವೈದ್ಯಕೀಯ ವೀಸಾಗಳಲ್ಲಿ ಭಾರತಕ್ಕೆ ಬಂದಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ತಿಂಗಳು ಐವರು ಅತ್ತಾರಿ-ವಾಘಾ ಗಡಿಯ ಮೂಲಕ ಮನೆಗೆ ಮರಳಿದ್ದರು. ಈಗ ಯಾವ ರೀತಿಯಲ್ಲಿ ಅವರನ್ನು ಕಳುಹಿಸಬಹುದು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ ಎನ್ನಲಾಗಿದೆ.
2019 ರ ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿಯ ನಂತರ ಎರಡೂ ದೇಶಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆಯೂ ಭಾರತ ತನ್ನತನವನ್ನು ಮೆರೆದಿದೆ.
ಏಜೆನ್ಸೀಸ್‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net