

ನವದೆಹಲಿ: ಸೆಪ್ಟೆಂಬರ್‌ನಲ್ಲಿ ಭಾರತ ಮತ್ತು ಕೆನಡಾ ನಡುವೆ ನಡೆದ ಉದ್ವಿಗ್ನತೆಯು ಎರಡೂ ದೇಶಗಳ ರಾಜತಾಂತ್ರಿಕರನ್ನು ಹೊರಹಾಕಲು ಕಾರಣವಾಯಿತು. ಅದರ ನಂತರ ಭಾರತವು ಕೆನಡಾಕ್ಕೆ ವೀಸಾ ಸೇವೆಯನ್ನು ಸ್ಥಗಿತಗೊಳಿಸಿತು. ಆದರೆ ಇದೀಗ ಭಾರತವು ಮತ್ತೆ ಕೆನಡಾದ ನಾಗರಿಕರಿಗೆ ಇ-ವೀಸಾ ಸೇವೆಗಳನ್ನು ಪ್ರಾರಂಭಿಸಿದೆ.
ಏನಿದು ವಿವಾದ?
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಈ ಕೊಲೆ ಸಂಬಂಧ ಭಾರತೀಯ ಏಜೆಂಟ್‌ಗಳನ್ನು ದೂಷಿಸಿದ್ದರು ಮತ್ತು ಈ ಕೊಲೆಯಲ್ಲಿ ಅವರ ಕೈವಾಡವಿದೆ ಎಂದು ಹೇಳಿದ್ದರು. ಆದರೆ, ಭಾರತ ಈ ಆರೋಪಗಳನ್ನು ಕಟುವಾಗಿ ನಿರಾಕರಿಸಿತ್ತು.
ವಿವಾದ ನಂತರ ಭೇಟಿಯಾಗುತ್ತಿರುವ ಟ್ರುಡೊ
ಭಾರತ-ಕೆನಡಾ ವಿವಾದದ ನಂತರ ಪ್ರಧಾನಿ ಮೋದಿ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ ಎಂಬುದು ಗಮನಾರ್ಹ. ಜಿ-20 ರ ವರ್ಚುವಲ್ ಶೃಂಗಸಭೆಯಲ್ಲಿ ಉಭಯ ನಾಯಕರ ಈ ಸಭೆ ನಡೆಯಲಿದೆ. ಹೀಗಿರುವಾಗ ಭೇಟಿಗೂ ಮುನ್ನವೇ ಭಾರತದ ನಡೆ ಸೌಹಾರ್ದದ ಹಸ್ತ ಚಾಚಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ. ಸೆಪ್ಟೆಂಬರ್ 21 ರಂದು ಕೆನಡಾದ ನಾಗರಿಕರಿಗೆ ಇ-ವೀಸಾ ಸೇವೆಯನ್ನು ಭಾರತ ನಿಷೇಧಿಸಿತ್ತು.
ಜೈಶಂಕರ್ ಹೇಳಿಕೆ
ಇತ್ತೀಚೆಗೆ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿದ್ದರು. ಭಾರತ ಯಾವುದೇ ತನಿಖೆಯನ್ನು ನಿರಾಕರಿಸುತ್ತಿಲ್ಲ ಎಂದ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರ ಕೈವಾಡದ ಕೆನಡಾದ ಆರೋಪಗಳ ಬಗ್ಗೆ ಸಾಕ್ಷ್ಯವನ್ನು ಒದಗಿಸುವಂತೆ ಕೇಳಿದರು. ಲಂಡನ್‌ನಲ್ಲಿ ಪತ್ರಕರ್ತ ಲಿಯೋನೆಲ್ ಬಾರ್ಬರ್ ಅವರೊಂದಿಗೆ ನಡೆದ 'ಹೌ ಎ ಬಿಲಿಯನ್ ಪೀಪಲ್ ಸೀ ದಿ ವರ್ಲ್ಡ್' ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಜೈಶಂಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಬ್ರಿಟನ್‌ಗೆ 5 ದಿನಗಳ ಅಧಿಕೃತ ಭೇಟಿಗಾಗಿ ಲಂಡನ್‌ಗೆ ತೆರಳಿರುವ ಜೈಶಂಕರ್, 'ನೀವು ಅಂತಹ ಆರೋಪ ಮಾಡಲು ಯಾವುದೇ ಕಾರಣವಿದ್ದರೆ ದಯವಿಟ್ಟು ಸಾಕ್ಷ್ಯವನ್ನು ಹಂಚಿಕೊಳ್ಳಿ. ಏಕೆಂದರೆ ನಾವು ತನಿಖೆಯನ್ನು ನಿರಾಕರಿಸುತ್ತಿಲ್ಲ. ಕೆನಡಾ ತನ್ನ ಆರೋಪವನ್ನು ಬೆಂಬಲಿಸುವ ಯಾವುದೇ ಪುರಾವೆಗಳನ್ನು ಭಾರತದೊಂದಿಗೆ ಹಂಚಿಕೊಂಡಿಲ್ಲ ಎಂದು ಅವರು ಒತ್ತಿ ಹೇಳಿದರು.
ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್ 18 ರಂದು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್ 'ಸಂಭವನೀಯ' ಭಾಗಿತ್ವದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟವು. ಭಾರತವು 2020 ರಲ್ಲಿ ನಿಜ್ಜರನ್ನು ಭಯೋತ್ಪಾದಕ ಎಂದು ಘೋಷಿಸಿತ್ತು.