3ನೇ ಟಿ20 ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಭಾರತ ತಂಡ, ಆಸೀಸ್ ಎದುರು ಕ್ಲೀನ್‌ಸ್ವೀಪ್ ಅವಕಾಶ ತಪ್ಪಿಸಿಕೊಂಡ ಕೊಹ್ಲಿ ಪಡೆ

virat kohli for web
Published on

ಸಿಡ್ನಿ: ನಾಯಕ ವಿರಾಟ್ ಕೊಹ್ಲಿ (85 ರನ್, 61 ಎಸೆತ, 4 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ ಭಾರತ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 12 ರನ್‌ಗಳಿಂದ ಸೋಲನುಭವಿಸಿತು. ಈ ಸೋಲಿನೊಂದಿಗೆ ಭಾರತ ತಂಡ 3 ಪಂದ್ಯಗಳ ಸರಣಿಯನ್ನು ವೈಟ್‌ವಾಷ್ ಮಾಡುವ ಅವಕಾಶ ತಪ್ಪಿಸಿಕೊಂಡಿತು. ಏಕದಿನ ಸರಣಿ ಸೋಲಿಗೆ ಪ್ರತೀಕಾರವಾಗಿ 2-1 ರಿಂದ ಚುಟುಕು ಕ್ರಿಕೆಟ್ ಸರಣಿ ಗೆದ್ದುಕೊಂಡಿತು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭದಲ್ಲೇ ಆರನ್ ಫಿಂಚ್ (0) ವೈಫಲ್ಯದ ನಡುವೆಯೂ ಮ್ಯಾಥ್ಯೂ ವೇಡ್ (80ರನ್, 53 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ (54ರನ್, 36 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಲವಾಗಿ 5 ವಿಕೆಟ್‌ಗೆ 186 ರನ್ ಪೇರಿಸಿತು.

ಪ್ರತಿಯಾಗಿ ಭಾರತ ತಂಡ ಆರಂಭದಲ್ಲೇ ಕನ್ನಡಿಗ ಕೆಎಲ್ ರಾಹುಲ್ (0) ವಿಕೆಟ್ ಕಳೆದುಕೊಂಡಿತು. ನಾಯಕ ವಿರಾಟ್ ಕೊಹ್ಲಿ, ಶಿಖರ್ ಧವನ್ (28ರನ್, 21 ಎಸೆತ, 3 ಬೌಂಡರಿ) 2ನೇ ವಿಕೆಟ್‌ಗೆ 74 ರನ್ ಪೇರಿಸಿ ಉತ್ತಮ ಆರಂಭ ನೀಡಲು ಯತ್ನಿಸಿತು. ಬಳಿಕ ಕೊಹ್ಲಿ ಏಕಾಂಗಿ ನಿರ್ವಹಣೆ ತೋರಿದರು. 19ನೇ ಓವರ್‌ನಲ್ಲಿ ಕೊಹ್ಲಿ ನಿರ್ಗಮನದೊಂದಿಗೆ ಭಾರತ ತಂಡದ ಸೋಲು ಖಚಿತಗೊಂಡಿತು. ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 174ರನ್ ಪೇರಿಸಲಷ್ಟೇ ಶಕ್ತವಾಯಿತು. ಡಿಸೆಂಬರ್ 17 ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಅಡಿಲೇಡ್‌ನಲ್ಲಿ ಅಹರ್ನಿಶಿಯಾಗಿ ನಡೆಯಲಿದೆ.

ಆಸ್ಟ್ರೇಲಿಯಾ: 5 ವಿಕೆಟ್‌ಗೆ 186 (ಮ್ಯಾಥ್ಯೂ ವೇಡ್ 80, ಸ್ಟೀವನ್ ಸ್ಮಿತ್ 24, ಗ್ಲೇನ್ ಮ್ಯಾಕ್ಸ್‌ವೆಲ್ 54, ವಾಷಿಂಗ್ಟನ್ ಸುಂದರ್ 34ಕ್ಕೆ 2, ಟಿ.ನಟರಾಜನ್ 33ಕ್ಕೆ 1, ಶಾರ್ದೂಲ್ ಠಾಕೂರ್ 43ಕ್ಕೆ 1), ಭಾರತ : 7 ವಿಕೆಟ್‌ಗೆ 174 (ರಾಹುಲ್ 0, ವಿರಾಟ್ ಕೊಹ್ಲಿ 85, ಶಿಖರ್ ಧವನ್ 28, ಹಾರ್ದಿಕ್ ಪಾಂಡ್ಯ 20, ಸ್ವಿಪ್‌ಮನ್ 23ಕ್ಕೆ 3, ಮ್ಯಾಕ್ಸ್‌ವೆಲ್ 20ಕ್ಕೆ 1, ಅಬೋಟ್ 49ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net