

ಪಾಟ್ನಾ: ಪಹಲ್ಗಾಮ್ನಲ್ಲಿ ಅಮಾಯಕ ನಾಗರಿಕರನ್ನು ಕೊಂದ ನೆರೆಯ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಬುಧವಾರ (ಅ.29) ಪ್ರತಿಪಾದಿಸಿದ್ದಾರೆ. ಅಲ್ಲದೆ, ಆಪರೇಷನ್ ಸಿಂಧೂರದ ಸಮಯದಲ್ಲಿ ಗಣನೀಯ ಸಂಖ್ಯೆಯ ಉಗ್ರರನ್ನು ತಟಸ್ಥಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಬಿಹಾರದ ದರ್ಭಾಂಗದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ನಾವು ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಉಗ್ರರ ಸಂಖ್ಯೆ ಗಣನೀಯವಾಗಿದ್ದು, ನಾವು ಕೋಪದಿಂದ ಕುದಿಯುತ್ತಿದ್ದೆವು ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಸಿಂಗ್, "ನಮ್ಮ ನೆರೆಯ ದೇಸ ಪಾಕಿಸ್ತಾನ ತನ್ನ ವರ್ತನೆಯನ್ನು ಸರಿಪಡಿಸಿಕೊಳ್ಳಲಿಲ್ಲ. ನಾವು ಸರ್ಜಿಕಲ್ ದಾಳಿಯ ನಂತರವೂ ಪಾಕ್ ಪಾಠ ಕಲಿಯಲಿಲ್ಲ ಎಂಬುದನ್ನು ನೀವು ನೋಡಿದ್ದೀರಿ. ಅಲ್ಲದೆ, ಪಾಕಿಸ್ತಾನದ ಭಯೋತ್ಪಾದಕರು ಕಾಶ್ಮೀರದ ಸೌಂದರ್ಯವನ್ನು ಆನಂದಿಸಲು ಹೋಗಿದ್ದ ಮುಗ್ಧ ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರು. ಉಗ್ರರು ಧರ್ಮ ಬಗ್ಗೆ ಕೇಳಿದ ನಂತರ ನಾಗರಿಕರನ್ನು ಕೊಲ್ಲಲಾಯಿತು ಎಂದು ಹೇಳಿದ್ದಾರೆ.
ಭಾರತವು ವಿಭಜನೆಯ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ. ನಾವು ಜಾತಿ ಅಥವಾ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುವುದಿಲ್ಲ. ನಮ್ಮ ರಾಜಕೀಯ ನ್ಯಾಯ ಮತ್ತು ಮಾನವೀಯತೆಯನ್ನು ಆಧರಿಸಿದೆ. ಪಹಲ್ಗಾಮ್ ದಾಳಿಗೆ ಭಾರತದ ಪ್ರತಿಕ್ರಿಯೆ ನಿರ್ಣಾಯಕ ಮತ್ತು ನೈತಿಕ ಎರಡೂ ಆಗಿತ್ತು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ನಾವು ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿದಾಗ, ನಮ್ಮ ಗುರಿ ಸ್ಪಷ್ಟವಾಗಿತ್ತು. ಗಡಿಯಾಚೆಗಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ದಾಳಿ ಮಾಡುವುದು. ನಾವು ಭಯೋತ್ಪಾದನೆಗೆ ಕಾರಣರಾದವರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ ಎಂದು ಸಿಂಗ್ ತಿಳಿಸಿದರು.
ವಸುಧೈವ ಕುಟುಂಬಕಂ ಎಂಬ ಮಂತ್ರದಲ್ಲಿ ನಂಬಿಕೆ ಇಟ್ಟಿರುವ ಭಾರತ ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸುತ್ತದೆ. ಅಲ್ಲದೆ, ನಮ್ಮ ಋಷಿಮುನಿಗಳು ಎಂದಿಗೂ ದ್ವೇಷವನ್ನು ಕಲಿಸಲಿಲ್ಲ. ಕರುಣೆಯನ್ನು ಕಲಿಸಿದರು ಎಂದು ರಕ್ಷಣಾ ಸಚಿವ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಿದಾಗ, ಹಿಂದೂ ಅಥವಾ ಮುಸ್ಲಿಂ ಎಂದು ಕೇಳಿದ್ದಾರೆಯೇ? ರೈತರಿಗೆ ನೆರವು ನೀಡಿದಾಗ, ಧರ್ಮವನ್ನು ನೋಡಿದ್ದಾರೆಯೇ? ಇಲ್ಲ. ಪ್ರತಿಯೊಬ್ಬ ಭಾರತೀಯರೂ ಪ್ರಯೋಜನ ಪಡೆದರು. ಇದು ಈ ರಾಷ್ಟ್ರದ ಸ್ಫೂರ್ತಿ ಎಂದು ರಾಜ್ನಾಥ್ ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್)