

ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರೀ ಸುಂಕದ ಹೊಡೆತಕ್ಕೆ ಸಿಲುಕಿದ ನಂತರ ಚೀನಾ ಈಗ ಭಾರತವನ್ನು(India & China) ನೆನಪಿಸಿಕೊಂಡಿದೆ. ಅಮೆರಿಕದ ಸುಂಕಗಳು ವಿಶ್ವ ಮಾರುಕಟ್ಟೆಗಳಲ್ಲಿ ಗೊಂದಲವನ್ನು ಸೃಷ್ಟಿಸಿವೆ. ಚೀನಾ ಸುಂಕಗಳನ್ನು ವಿರೋಧಿಸುತ್ತಲೇ ಇದ್ದರೂ ಅದು ಆಂತರಿಕವಾಗಿ ಆತಂಕಕ್ಕೊಳಗಾಗಿದೆ. ಇದೇ ಕಾರಣಕ್ಕಾಗಿ ಬೀಜಿಂಗ್ ಈಗ ಭಾರತವನ್ನು ಸ್ನೇಹಕ್ಕಾಗಿ ಮನವಿ ಮಾಡಿದೆ ಮತ್ತು ಕಠಿಣ ಪರಿಸ್ಥಿತಿಯನ್ನು ನಿವಾರಿಸಲು ಭಾರತವು ತನ್ನೊಂದಿಗೆ ನಿಲ್ಲುವಂತೆ ವಿನಂತಿಸಿದೆ.
ಅಮೆರಿಕವು ಅದರ ಮೇಲಿನ ಸುಂಕವನ್ನು 104%ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ ಸಮಯದಲ್ಲಿ ಚೀನಾದಿಂದ ಈ ಮನವಿ ಬಂದಿದೆ. ಇದಕ್ಕೂ ಮೊದಲು, ಟ್ರಂಪ್ 34% ಪರಸ್ಪರ ಸುಂಕವನ್ನು ವಿಧಿಸಿದ ನಂತರ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ ಹಲವಾರು ದಿನಗಳವರೆಗೆ ಮುಂದುವರಿಯಿತು. ಟ್ರಂಪ್ಗೆ ಪ್ರತಿಕ್ರಿಯೆಯಾಗಿ ಚೀನಾ ಕೂಡ ಪ್ರತೀಕಾರ ತೀರಿಸಿಕೊಂಡು ಅಮೆರಿಕದ ಮೇಲೆ 34% ಸುಂಕ ವಿಧಿಸಿತು. ಇದು ಟ್ರಂಪ್ ಅವರನ್ನು ಕೆರಳಿಸಿತು ಮತ್ತು ಚೀನಾ ತನ್ನ ಪ್ರತೀಕಾರದ ಯೋಜನೆಯನ್ನು ಹಿಂತೆಗೆದುಕೊಳ್ಳದಿದ್ದರೆ ಹೆಚ್ಚುವರಿಯಾಗಿ ಶೇಕಡಾ 50ರಷ್ಟು ಸುಂಕವನ್ನು ವಿಧಿಸುವುದಾಗಿ ಹೇಳಿದರು.
ಮಂಗಳವಾರ(ಏಪ್ರಿಲ್ 8) ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಅವರು ಚೀನಾ ವಿರುದ್ಧ ಹೆಚ್ಚುವರಿ ಶೇಕಡಾ 50ರಷ್ಟು ಸುಂಕವು ಬುಧವಾರದಿಂದ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು. ಇದರೊಂದಿಗೆ ಚೀನಾದ ಮೇಲಿನ ಅಮೆರಿಕದ ಒಟ್ಟು ಸುಂಕವು 104% ತಲುಪುತ್ತದೆ.
ಅಮೆರಿಕದ ಕ್ರಮವನ್ನು ಟೀಕಿಸಿದ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್, ಚೀನಾದ ಆರ್ಥಿಕತೆಯು ಸ್ಥಿರವಾದ ಬೆಳವಣಿಗೆಯನ್ನು ಖಾತ್ರಿಪಡಿಸುವ ವ್ಯವಸ್ಥೆಯನ್ನು ಆಧರಿಸಿದೆ ಮತ್ತು ದೇಶವು ಆರ್ಥಿಕ ಜಾಗತೀಕರಣ ಮತ್ತು ಬಹುಪಕ್ಷೀಯತೆಯ ಬಲವಾದ ಬೆಂಬಲಿಗನಾಗಿದ್ದು ಜಾಗತಿಕ ಬೆಳವಣಿಗೆಗೆ ಸರಾಸರಿ ಶೇ.30ರಷ್ಟು ಕೊಡುಗೆ ನೀಡುತ್ತದೆ ಎಂದು ಹೇಳಿದರು.
ಚೀನಾ-ಭಾರತ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳು ಪೂರಕತೆ ಮತ್ತು ಪರಸ್ಪರ ಲಾಭವನ್ನು ಆಧರಿಸಿವೆ ಎಂದು ಯು ಜಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮೆರಿಕದ ಸುಂಕದ ದುರುಪಯೋಗವನ್ನು ಎದುರಿಸುತ್ತಿರುವ ಎರಡು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ತೊಂದರೆಗಳನ್ನು ನಿವಾರಿಸಲು ಒಟ್ಟಾಗಿ ನಿಲ್ಲಬೇಕು. ಅಮೆರಿಕದ ಸುಂಕಗಳು ಜಾಗತಿಕ ದಕ್ಷಿಣ ದೇಶಗಳ ಅಭಿವೃದ್ಧಿ ಹಕ್ಕನ್ನು ಕಸಿದುಕೊಳ್ಳುತ್ತಿವೆ ಎಂದು ಅವರು ಬಣ್ಣಿಸಿದರು.
ಎಲ್ಲಾ ದೇಶಗಳು ವ್ಯಾಪಕ ಸಮಾಲೋಚನೆಯ ತತ್ವಗಳನ್ನು ಎತ್ತಿಹಿಡಿಯಬೇಕು. ನಿಜವಾದ ಬಹುಪಕ್ಷೀಯತೆಯನ್ನು ಅಭ್ಯಾಸ ಮಾಡಬೇಕು ಮತ್ತು ಎಲ್ಲಾ ರೀತಿಯ ಏಕಪಕ್ಷೀಯತೆ ಮತ್ತು ರಕ್ಷಣಾವಾದವನ್ನು ಜಂಟಿಯಾಗಿ ವಿರೋಧಿಸಬೇಕು ಎಂದು ಯು ಹೇಳಿದರು. ವ್ಯಾಪಾರ ಯುದ್ಧಗಳು ಮತ್ತು ಸುಂಕ ಯುದ್ಧಗಳಲ್ಲಿ ಯಾರೂ ವಿಜೇತರಲ್ಲ ಎಂದು ಅವರು ಹೇಳಿದರು.(ಏಜೆನ್ಸೀಸ್)