

ಮೆಲ್ಬೋರ್ನ್: ಭಾರತ ತಂಡದ ಮುಂಬರುವ ಆಸ್ಟ್ರೆಲಿಯಾ ಪ್ರವಾಸದ ಸೀಮಿತ ಓವರ್ ಸರಣಿಗೆ ಇನ್ನೂ 50ಕ್ಕೂ ಅಧಿಕ ದಿನಗಳು ಬಾಕಿ ಉಳಿದಿದ್ದರೂ, ಸರಣಿಯ ಎಲ್ಲ 8 ಪಂದ್ಯಗಳ ಭಾರತೀಯ ವಲಯದ ಟಿಕೆಟ್ಗಳು ಈಗಾಗಲೆ ಸೋಲ್ಡ್ಔಟ್ ಆಗಿವೆ ಎಂದು ಕ್ರಿಕೆಟ್ ಆಸ್ಟ್ರೆಲಿಯಾ (ಸಿಎ) ಶನಿವಾರ ಪ್ರಕಟಿಸಿದೆ.
ಸಿಡ್ನಿ ಮತ್ತು ಕ್ಯಾನ್ಬೆರಾದಲ್ಲಿ ನಡೆಯಲಿರುವ ಪಂದ್ಯಗಳ ಎಲ್ಲ ಸಾರ್ವಜನಿಕ ಟಿಕೆಟ್ಗಳು ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಸಿಎ ತಿಳಿಸಿದೆ. ಭಾರತ ತಂಡ ಪ್ರವಾಸದಲ್ಲಿ ಅಕ್ಟೋಬರ್ 19ರಿಂದ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿ ಆಡಲಿದೆ. ಇದು ಭಾರತದ ಬ್ಯಾಟಿಂಗ್ ತಾರೆಯರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಕೊನೇ ಆಸ್ಟ್ರೆಲಿಯಾ ಪ್ರವಾಸ ಎನಿಸುವ ಕಾರಣದಿಂದಲೂ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.
ಏಷ್ಯಾಕಪ್ ಪಂದ್ಯಗಳು ಅರ್ಧ ಗಂಟೆ ವಿಳಂಬ
ದುಬೈ: ಮುಂಬರುವ ಏಷ್ಯಾಕಪ್ ಟಿ20 ಟೂರ್ನಿಯ 19 ಪಂದ್ಯಗಳ ಪೈಕಿ 18 ಪಂದ್ಯಗಳು ಅರ್ಧ ಗಂಟೆ ತಡವಾಗಿ ಆರಂಭವಾಗಲಿವೆ. ಯುಎಇಯಲ್ಲಿನ ಉಷ್ಣ ಹವಾಮಾನದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸ್ಥಳಿಯ ಕಾಲಮಾನ ಸಂಜೆ 6ಕ್ಕೆ ಶುರುವಾಗಬೇಕಿದ್ದ ಪಂದ್ಯಗಳು ಇದೀಗ 6.30ಕ್ಕೆ ಶುರುವಾಗಲಿವೆ.
ಅಂದರೆ ಭಾರತೀಯ ಕಾಲಮಾನ ರಾತ್ರಿ 7.30ರಿಂದ ನಡೆಯಬೇಕಿದ್ದ ಪಂದ್ಯಗಳು ರಾತ್ರಿ 8ರಿಂದ ನಡೆಯಲಿವೆ. ಸೆಪ್ಟೆಂಬರ್ 9ರಿಂದ ನಡೆಯಲಿರುವ ಟೂರ್ನಿಯಲ್ಲಿ ಯುಎಇ&ಓಮನ್ ನಡುವಿನ ಏಕೈಕ ಹಗಲು ಪಂದ್ಯ ಮಾತ್ರ ಈ ಮೊದಲಿನ ಸಮಯದಲ್ಲೇ (ಭಾರತೀಯ ಕಾಲಮಾನ ಸಂಜೆ 5.30) ಶುರುವಾಗಲಿದೆ.