

ದುಬೈ: ಸತತ ಮೂರು ಜಯದೊಂದಿಗೆ ಅಜೇಯವಾಗಿ ಬೀಗುತ್ತಿರುವ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಂಗಳವಾರ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೆಲಿಯಾ ವಿರುದ್ಧ ಸೆಣಸಲಿದೆ. ದುಬೈನಲ್ಲೇ ಆಡಿದ 3 ಲೀಗ್ ಪಂದ್ಯಗಳಲ್ಲಿ ಸರ್ವಾಂಗೀಣ ನಿರ್ವಹಣೆಯೊಂದಿಗೆ ಗೆದ್ದಿರುವ ರೋಹಿತ್ ಶರ್ಮ, ಕಾಂಗರೂಗಳ ವಿರುದ್ಧವೂ ಇದೇ ಲಯದಲ್ಲಿ ಮುಂದುವರಿಯುವ ಹಂಬಲದಲ್ಲಿದೆ. ಈ ಮೂಲಕ 2023ರ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಮತ್ತು ತವರಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯಗಳ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕ ಭಾರತ ತಂಡದ್ದಾಗಿದೆ.
ಒಂದೂವರೆ ವರ್ಷದ ಹಿಂದೆ ತವರಿನ ಏಕದಿನ ವಿಶ್ವಕಪ್ನಲ್ಲಿ ಸತತ 10 ಜಯದೊಂದಿಗೆ ಅಜೇಯವಾಗಿ ಫೈನಲ್ಗೇರಿದ್ದ ಭಾರತ ತಂಡಕ್ಕೆ ಆಸೀಸ್ ಆಘಾತ ನೀಡಿತ್ತು. ಈ ಬಾರಿಯೂ ಅಜೇಯವಾಗಿ ಮುನ್ನಡೆಯುತ್ತಿರುವ ಭಾರತಕ್ಕೆ ಮತ್ತೆ ಆಸ್ಟ್ರೆಲಿಯಾವೇ ಎದುರಾಗಿದೆ. ನಾಯಕ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಸಲ್ವುಡ್, ಮಿಚೆಲ್ ಸ್ಟಾರ್ಕ್ರಂಥ ಪ್ರಮುಖ ವೇಗಿಗಳ ಗೈರಿನ ಹಿನ್ನಡೆಯೊಂದಿಗೆ ಆಸೀಸ್ ಟೂರ್ನಿಗೆ ಆಗಮಿಸಿತ್ತು. ಆದರೂ ಉಪಾಂತ್ಯಕ್ಕೇರುವಲ್ಲಿ ಯಶಸ್ವಿಯಾಗಿದೆ. ಐಸಿಸಿ ಟೂರ್ನಿಗಳಲ್ಲಿ ಆಸೀಸ್ ಯಾವಾಗಲೂ ಅಪಾಯಕಾರಿ ಎನಿಸಿರುವುದರಿಂದ ಭಾರತ ಎಚ್ಚರಿಕೆಯಿಂದ ಸವಾಲು ಎದುರಿಸಬೇಕಿದೆ.
ಭಾರತ ತಂಡ ಟೂರ್ನಿಗೆ ಐವರು ಸ್ಪಿನ್ನರ್ಗಳನ್ನು ಆರಿಸಿದಾಗ ಅಚ್ಚರಿ ವ್ಯಕ್ತವಾಗಿತ್ತು. ಅದರಲ್ಲೂ ವರುಣ್ ಚಕ್ರವರ್ತಿ ಅವರನ್ನು ಕೊನೇಕ್ಷಣದಲ್ಲಿ ಯಶಸ್ವಿ ಜೈಸ್ವಾಲ್ ಬದಲಿಗೆ ಸೇರ್ಪಡೆಗೊಳಿಸಿದ್ದು ಹುಬ್ಬೇರುವಂತೆ ಮಾಡಿತ್ತು. ಆದರೆ ಭಾರತದ ಈ ನಿರ್ಧಾರ ಕಿವೀಸ್ ವಿರುದ್ಧ ಕೊನೇ ಲೀಗ್ ಪಂದ್ಯದಲ್ಲಿ ಉತ್ತಮ ಯಶಸ್ಸನ್ನೇ ತಂದುಕೊಟ್ಟಿದೆ. ಚಕ್ರವರ್ತಿ ಸಹಿತ ನಾಲ್ವರು ಸ್ಪಿನ್ನರ್ಗಳನ್ನು ಆಡಿಸಿ ಭಾರತ ತಂಡ ದುಬೈನ ಸ್ಲೋಪಿಚ್ನಲ್ಲಿ ಮಾಸ್ಟರ್ಸ್ಟ್ರೊಕ್ ಪ್ರದರ್ಶಿಸಿತ್ತು. ಇದೀಗ ಆಸ್ಟ್ರೆಲಿಯಾ ವಿರುದ್ಧವೂ ಇದೇ ಕಾರ್ಯತಂತ್ರ ಮುಂದುವರಿಸುವ ನಿರೀಕ್ಷೆ ಇದೆ.
ಆಸೀಸ್ಗೆ ಬೌಲಿಂಗ್ ವಿಭಾಗದ ಚಿಂತೆ
ಇಂಗ್ಲೆಂಡ್ ವಿರುದ್ಧ 350 ಪ್ಲಸ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದ ಆಸೀಸ್ ನಂತರದ 2 ಪಂದ್ಯಗಳಲ್ಲಿ ಮಳೆ ಅಡಚಣೆ ಎದುರಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮಳೆಯಿಂದಾಗಿ ಒಂದೂ ಎಸೆತವಿಲ್ಲದೆ ರದ್ದುಗೊಂಡಿದ್ದರೆ, ಅಫ್ಘಾನಿಸ್ತಾನ ಎದುರು ಗೆಲುವಿನ ಹಾದಿಯಲ್ಲಿದ್ದಾಗ ಕಾಡಿದ ಮಳೆಯಿಂದಾಗಿ ಅಂಕ ಹಂಚಿಕೊಂಡಿತ್ತು. ಟೂರ್ನಿಗೆ ಮೊದಲೇ ಗಾಯದ ಸಮಸ್ಯೆ ಎದುರಿಸಿದ್ದ ಆಸೀಸ್ಗೆ ಇದೀಗ ಮ್ಯಾಥ್ಯೂ ಶಾರ್ಟ್ ಅಲಭ್ಯತೆಯ ಹೊಡೆತ ಬಿದ್ದಿದೆ. ಭಾರತದ ಸ್ಪಿನ್ ಅಸ್ತ್ರದ ಎದುರು ಆಸೀಸ್ ಏಕೈಕ ತಜ್ಞ ಸ್ಪಿನ್ನರ್ (ಜಂಪಾ) ಹೊಂದಿದೆ. ಅವರಿಗೆ ಅರೆಕಾಲಿಕ ಸ್ಪಿನ್ನರ್ಗಳಾದ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಟ್ರಾವಿಸ್ ಹೆಡ್ ಬೆಂಬಲ ಒದಗಿಸಬೇಕಾಗಿದೆ. ಆದರೆ ಆಸೀಸ್ ಬ್ಯಾಟಿಂಗ್ ವಿಭಾಗ ಭಾರತಕ್ಕೆ ಸವಾಲೆನಿಸಬಹುದು. ಪ್ರಮುಖವಾಗಿ ಟ್ರಾವಿಸ್ ಹೆಡ್ ಈ ಸಲವೂ ಕಂಟಕ ಆಗದಂತೆ ಭಾರತ ಬೇಗನೆ ಕಡಿವಾಣ ಹಾಕಬೇಕಿದೆ.
ಟೀಮ್ ನ್ಯೂಸ್
ಭಾರತ: ನಾಲ್ವರು ಸ್ಪಿನ್ನರ್ಗಳ ಕಾರ್ಯತಂತ್ರ ಮುಂದುವರಿಸಿದರೆ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆಯ ಸಾಧ್ಯತೆ ಇಲ್ಲ. ಆದರೆ ಸೆಮಿೈನಲ್ ಪಂದ್ಯವನ್ನು ಆಡಲಾಗುವ ದುಬೈ ಸ್ಟೇಡಿಯಂನ ಪಿಚ್ಅನ್ನು ಗಮನಿಸಿ ಭಾರತ ತಂಡ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು. ವೇಗಿ ಮೊಹಮದ್ ಶಮಿ ಮೊದಲ ಪಂದ್ಯದಲ್ಲಿ ಬಾಂಗ್ಲಾ ಎದುರು 5 ವಿಕೆಟ್ ಕಬಳಿಸಿದ ಬಳಿಕ ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿಲ್ಲ. ಅವರ ಫಿಟ್ನೆಸ್ ಬಗ್ಗೆಯೂ ಅನುಮಾನ ಮೂಡಿದೆ. ಆದರೂ ಮಹತ್ವದ ಪಂದ್ಯದಲ್ಲಿ ಶಮಿ ಬದಲಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಇದೆ.
ಆಸ್ಟ್ರೆಲಿಯಾ: ಮ್ಯಾಥ್ಯೂ ಶಾರ್ಟ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವುದರಿಂದ ಆಸೀಸ್ ತಂಡ ಸೆಮೀಸ್ಗೆ ಆಡುವ 11ರ ಬಳಗದಲ್ಲಿ ಮತ್ತು ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡುವುದು ಅನಿವಾರ್ಯವೆನಿಸಿದೆ. ಶಾರ್ಟ್ ಸ್ಥಾನದಲ್ಲಿ ಯುವ ಆರಂಭಿಕ ಜೇಕ್ ್ರೇಸರ್&ಮೆಗ್ಗುರ್ಕ್ ಸ್ಥಾನ ಪಡೆಯಬಹುದು. ಆದರೆ ಇದರಿಂದ ಶಾರ್ಟ್ ಅವರ ಆ್ ಸ್ಪಿನ್ ಬೌಲಿಂಗ್ ಮಿಸ್ ಆಗಬಹುದು. ಇದನ್ನು ತಪ್ಪಿಸಲು ಆಸೀಸ್, ಶಾರ್ಟ್ ಬದಲಿಗೆ ತಂಡ ಸೇರಿರುವ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಕೂಪರ್ ಕೊನೊಲಿಗೆ ಅವಕಾಶ ಕಲ್ಪಿಸಿದರೂ ಅಚ್ಚರಿ ಇಲ್ಲ.
ಮುಖಾಮುಖಿ: 151
ಭಾರತ: 57
ಆಸ್ಟ್ರೆಲಿಯಾ: 84
ರದ್ದು: 10
ಆರಂಭ: ಮಧ್ಯಾಹ್ನ 2.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಐಸಿಸಿ ನಾಕೌಟ್ ಮುಖಾಮುಖಿ
1998:ಚಾಂಪ್ಸ್ ಟ್ರೋಫಿ ಕ್ವಾರ್ಟರ್ಫೈನಲ್: ಭಾರತಕ್ಕೆ ಜಯ
2000:ಚಾಂಪ್ಸ್ ಟ್ರೋಫಿ ಕ್ವಾರ್ಟರ್ಫೈನಲ್: ಭಾರತಕ್ಕೆ ಜಯ
2003:ಏಕದಿನ ವಿಶ್ವಕಪ್ ಫೈನಲ್: ಆಸ್ಟ್ರೆಲಿಯಾಕ್ಕೆ ಗೆಲುವು
2007: ಟಿ20 ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಗೆಲುವು
2011: ಏಕದಿನ ವಿಶ್ವಕಪ್ ಕ್ವಾರ್ಟರ್ಫೈನಲ್: ಭಾರತಕ್ಕೆ ಜಯ
2015: ಏಕದಿನ ವಿಶ್ವಕಪ್ ಸೆಮಿಫೈನಲ್: ಆಸ್ಟ್ರೆಲಿಯಾಕ್ಕೆ ಜಯ
2023: ಏಕದಿನ ವಿಶ್ವಕಪ್ ಫೈನಲ್: ಆಸ್ಟ್ರೆಲಿಯಾಕ್ಕೆ ಜಯ
2023: ಟೆಸ್ಟ್ ವಿಶ್ವಕಪ್ ಫೈನಲ್: ಆಸ್ಟ್ರೆಲಿಯಾಕ್ಕೆ ಗೆಲುವು
10 ಇಯರ್ ಚಾಲೆಂಜ್!
2015 ಮತ್ತು 2023ರ ಏಕದಿನ ವಿಶ್ವಕಪ್ಗಳಲ್ಲಿ ಸೆಮಿಫೈನಲ್ಗೇರಿದ್ದ 4 ತಂಡಗಳೇ ಈ ಸಲ ಚಾಂಪಿಯನ್ಸ್ ಟ್ರೋಫಿಯಲ್ಲೂ ಉಪಾಂತ್ಯ ಪ್ರವೇಶಿಸಿವೆ. ಈ ಪೈಕಿ 2015ರ ಏಕದಿನ ವಿಶ್ವಕಪ್ ಸೆಮಿಫೈನಲ್ನಂತೆಯೇ ಈ ಸಲವೂ ಮುಖಾಮುಖಿ ಏರ್ಪಟ್ಟಿದೆ. ಆಗಲೂ ಆಸೀಸ್&ಭಾರತ, ನ್ಯೂಜಿಲೆಂಡ್-ದ. ಆಫ್ರಿಕಾ ನಡುವೆ ಸೆಮೀಸ್ ಏರ್ಪಟ್ಟಿತ್ತು. ಆಗ ಆಸೀಸ್, ಕಿವೀಸ್ ಗೆದ್ದಿದ್ದವು. ಆಗ ಆಸ್ಟ್ರೆಲಿಯಾ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತ ತಂಡಕ್ಕೆ ಎದುರಾಗಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ "10 ಇಯರ್ ಚಾಲೆಂಜ್' ಎಂದು ಬಣ್ಣಿಸಲಾಗುತ್ತಿದೆ.
ಶಾರ್ಟ್ ಬದಲಿಗೆ ಕೂಪರ್
ಆಸೀಸ್ ಬ್ಯಾಟರ್ ಮ್ಯಾಥ್ಯೂ ಶಾರ್ಟ್ ಆ್ಘನ್ ವಿರುದ್ಧದ ಕೊನೇ ಲೀಗ್ ಪಂದ್ಯದ ವೇಳೆ ಗಾಯಗೊಂಡಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಯುವ ಆಲ್ರೌಂಡರ್ ಕೂಪರ್ ಕೊನೊಲಿ ಸೇರ್ಪಡೆಯಾಗಿದ್ದಾರೆ. 21 ವರ್ಷದ ಕೂಪರ್ ಕಳೆದ ವರ್ಷ ಇಂಗ್ಲೆಂಡ್ನಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರು ಮೀಸಲು ಆಟಗಾರರಾಗಿ ಈಗಾಗಲೆ ಆಸೀಸ್ ತಂಡದೊಂದಿಗೆ ಇದ್ದರು. ಇದೀಗ ಆಸೀಸ್ ತಂಡಕ್ಕೆ ಅವರನ್ನು ಸೇರಿಸಿಕೊಳ್ಳಲು ಐಸಿಸಿಯ ತಾಂತ್ರಿಕ ಸಮಿತಿ ಸಮ್ಮತಿ ನೀಡಿದೆ. ಎಡಗೈ ಬ್ಯಾಟರ್ ಮತ್ತು ಎಡಗೈ ಸ್ಪಿನ್ನರ್ ಆಗಿರುವ ಕೂಪರ್ ಕೊನೊಲಿ ಇದುವರೆಗೆ 3 ಏಕದಿನ, 1 ಟೆಸ್ಟ್, 2 ಟಿ20 ಸಹಿತ ಆಸೀಸ್ ಪರ ಒಟ್ಟು 6 ಪಂದ್ಯಗಳನ್ನಷ್ಟೇ ಆಡಿದ್ದಾರೆ.
ನಾಲ್ವರು ಸ್ಪಿನ್ನರ್ಗಳ ಕಾರ್ಯತಂತ್ರ ಮುಂದುವರಿಸಲು ರೋಹಿತ್ ಒಲವು
ಕೊನೇ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ನಾಲ್ವರು ಸ್ಪಿನ್ನರ್ಗಳನ್ನು ಆಡಿಸಿ ಯಶಸ್ಸು ಕಂಡಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮ, ಸೆಮಿೈನಲ್ನಲ್ಲಿ ಆಸ್ಟ್ರೆಲಿಯಾ ವಿರುದ್ಧವೂ ಇದೇ ಕಾರ್ಯತಂತ್ರ ಮುಂದುವರಿಸುವ ಒಲವು ತೋರಿದ್ದಾರೆ. ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ನ್ಯೂಜಿಲೆಂಡ್ ತಂಡದ 9 ವಿಕೆಟ್ಗಳನ್ನು ಹಂಚಿಕೊಂಡಿದ್ದರು. ಅಲ್ಲದೆ 39 ಓವರ್ಗಳ ದಾಳಿಯಲ್ಲಿ 128 ಎಸೆತಗಳಲ್ಲಿ ಒಂದೂ ರನ್ ಬಿಟ್ಟುಕೊಟ್ಟಿರಲಿಲ್ಲ. "ದುಬೈ ವಾತಾವರಣದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿರುವ ಕಾರಣ ಈ ಕಾರ್ಯತಂತ್ರ ಅನುಸರಿಸಿದೆವು. ಸೆಮೀಸ್ನಲ್ಲೂ ಇದನ್ನೆ ಮುಂದುವರಿಸುವ ಚಿಂತನೆಯಲ್ಲಿದ್ದೇವೆ' ಎಂದು ರೋಹಿತ್ ಶರ್ಮ ಹೇಳಿದ್ದಾರೆ.
*6: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಇದು ಆರನೇ ಸೆಮಿಫೈನಲ್ ಆಗಿದೆ. ಈ ಹಿಂದಿನ 5ರಲ್ಲಿ 4ರಲ್ಲಿ ಭಾರತ ಜಯಿಸಿದೆ.
*5: ಭಾರತ ಗೆದ್ದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ 5ನೇ ಬಾರಿ ಮತ್ತು ಸತತ 3ನೇ ಬಾರಿ ಫೈನಲ್ ಪ್ರವೇಶಿಸಿದಂತಾಗುತ್ತದೆ. ಈ ಮುನ್ನ 2000, 2002, 2013, 2017ರಲ್ಲಿ ಫೈನಲ್ಗೇರಿತ್ತು.
*3: ಆಸ್ಟ್ರೆಲಿಯಾ ಗೆದ್ದರೆ 3ನೇ ಬಾರಿ (2006, 2009) ಮತ್ತು 16 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಫೈನಲ್ಗೇರಿದಂತಾಗುತ್ತದೆ.
*ಇದೊಂದು ಉತ್ತಮ ಪಂದ್ಯವಾಗಿರಲಿದೆ. ಐಸಿಸಿ ಟೂರ್ನಿಗಳಲ್ಲಿ ಆಸೀಸ್ ಶ್ರೀಮಂತ ಇತಿಹಾಸ ಹೊಂದಿದೆ. ನಾವೀಗ ಪಂದ್ಯದ ದಿನ ಸರಿಯಾದ ಕಾರ್ಯತಂತ್ರವನ್ನು ಜಾರಿಗೊಳಿಸುವತ್ತ ಗಮನಹರಿಸಿದ್ದೇವೆ. ಒತ್ತಡ ಎರಡೂ ತಂಡಗಳ ಮೇಲಿದೆ.
| ರೋಹಿತ್ ಶರ್ಮ, ಭಾರತ ತಂಡದ ನಾಯಕ
4: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ತಂಡಗಳು ಇದುವರೆಗೆ 4 ಬಾರಿ ಮುಖಾಮುಖಿ ಆಗಿದ್ದು, ಭಾರತ 2ರಲ್ಲಿ ಗೆದ್ದಿದ್ದರೆ, ಆಸೀಸ್ 1ರಲ್ಲಿ ಜಯಿಸಿದೆ. ಇನ್ನೊಂದು ಪಂದ್ಯ ರದ್ದುಗೊಂಡಿದೆ.
ಪಾಕಿಸ್ತಾನದಲ್ಲಿ ಆಡುತ್ತಿದ್ದರೂ ಭಾರತಕ್ಕೆ ಲಾಭ ಇರುತಿತ್ತು!
ಭಾರತ ತಂಡ ಹೈಬ್ರಿಡ್ ಮಾದರಿಯ ಅನ್ವಯ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲೇ ಆಡುತ್ತಿರುವುದು ಲಾಭದಾಯಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುತ್ತಿದ್ದರೂ, ಒಂದೇ ತಾಣದಲ್ಲಿ ತನ್ನ ಎಲ್ಲ ಪಂದ್ಯಗಳನ್ನು ಆಡುವ ಲಾಭ ಪಡೆಯುತ್ತಿತ್ತು ಎಂಬುದು ಗಮನಾರ್ಹ. ಯಾಕೆಂದರೆ ಭದ್ರತಾ ಕಾರಣಗಳಿಂದಾಗಿ ಭಾರತ ತಂಡ ಪಾಕಿಸ್ತಾನದ ಲಾಹೋರ್ನಲ್ಲೇ ಎಲ್ಲ ಪಂದ್ಯಗಳನ್ನು ಆಡಬೇಕಾಗುತಿತ್ತು. ಹೀಗಾಗಿ ಹೈಬ್ರಿಡ್ ಮಾದರಿಯಿಂದಷ್ಟೇ ಭಾರತಕ್ಕೆ ಲಾಭವಾಗಿದೆ ಎಂಬ ವಾದ ಒಪ್ಪುವಂಥದ್ದಲ್ಲ.
ಇಂದು ಫೈನಲ್ ತಾಣವೂ ನಿರ್ಧಾರ!
ಐಸಿಸಿ ಚಾಂಪಿಯನ್ಸ್ ಟ್ರೋಫಿ 9ನೇ ಆವೃತ್ತಿಯ ಫೈನಲ್ ಪಂದ್ಯ ಯಾವ ತಾಣದಲ್ಲಿ ನಡೆಯಲಿದೆ ಎಂಬುದು ಕೂಡ ಮಂಗಳವಾರ ಭಾರತ-ಆಸೀಸ್ ನಡುವಿನ ಸೆಮಿಫೈನಲ್ ಪಂದ್ಯದ ಲಿತಾಂಶದೊಂದಿಗೆ ನಿರ್ಧಾರವಾಗಲಿದೆ. ಐಸಿಸಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈಗಾಗಲೆ ರೂಪಿಸಿರುವ ಹೈಬ್ರಿಡ್ ಮಾದರಿಯ ಅನ್ವಯ, ಭಾರತ ತಂಡ ಗೆದ್ದರೆ ಫೈನಲ್ ಪಂದ್ಯ ದುಬೈನಲ್ಲೇ ನಡೆಯಲಿದೆ. ಭಾರತ ತಂಡ ಸೆಮೀಸ್ ಸೋತರೆ, ಫೈನಲ್ ಪಂದ್ಯ ಪಾಕಿಸ್ತಾನದ ಲಾಹೋರ್ನಲ್ಲಿ ನಡೆಯಲಿದೆ.