

ನವದೆಹಲಿ: ಲಡಾಖ್ ಪೂರ್ವಭಾಗದ ಮುಂಚೂಣಿ ನೆಲೆಗಳಲ್ಲಿ ನಿಯೋಜಿಸಲಾಗಿರುವ ಯೋಧರನ್ನು ತಂಡೋಪತಂಡವಾಗಿ ಹಿಂದಕ್ಕೆ ಕರಿಸಿಕೊಳ್ಳಲು ಭಾರತ ಮತ್ತು ಚೀನಾ ಸಮ್ಮತಿಸಿವೆ ಎಂದು ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ಬುಧವಾರ ವರದಿ ಮಾಡಿದೆ.
ಮಿಲಿಟರಿ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಜತೆಗೆ ಗಡಿಯಲ್ಲಿ ಮೂಡಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಣಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಭಾರತ ಮತ್ತು ಚೀನಾ ಸೇನಾಪಡೆಯ ಕೋರ್ ಕಮಾಂಡರ್ ಮಟ್ಟದಲ್ಲಿ 12 ಗಂಟೆ ನಡೆದ ಸುದೀರ್ಘ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿ ಹೇಳಿದೆ. ಲಡಾಖ್ನಲ್ಲಿ ಏಳು ವಾರಗಳಿಂದ ಉಂಟಾಗಿರುವ ಬಿಕ್ಕಟ್ಟನ್ನು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ತುರ್ತಾದ, ಹಂತಹಂತವಾಗಿ ಮತ್ತು ಒಂದಾದ ನಂತರ ಮತ್ತೊಂದರ ರೀತಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಉಭಯ ಸೇನಾಪಡೆಗಳ ಅಧಿಕಾರಿಗಳು ಅಭಿಪ್ರಾಯಪಟ್ಟರು ಎಂದು ಭಾರತೀಯ ಮೂಲಗಳು ಮಂಗಳವಾರ ತಿಳಿಸಿದ್ದವು.