ಇಂಡಿ ಶಾಖಾ ಕಾಲುವೆ ನವೀಕರಣ, ಕೇಂದ್ರ ಸರ್ಕಾರದಿಂದ ಡಿಪಿಆರ್ ಸಲ್ಲಿಸಲು ಸೂಚನೆ, ಯೋಜನೆ ಹಿಂದೆ ಕಾಂಗ್ರೆಸ್ ಪಾತ್ರವೂ ಇದೆ ಎಸ್.ಎಂ. ಪಾಟೀಲ ಗಣಿಹಾರ

GANIHAR PRESS MEET IBC
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ವಸಂತ ಹೊನಮೋಡೆ, ನಾಗರಾಜ ಲಂಬು ಇದ್ದಾರೆ.
Published on

ವಿಜಯಪುರ: ಇಂಡಿ ಶಾಖಾ ಕಾಲುವೆ ಆಧುನೀಕರಣ ಹಾಗೂ ನವೀಕರಣಕ್ಕೆ ಅನುದಾನ ನೀಡಲು ಸಮ್ಮತಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಈ ನಿರ್ಧಾರದ ಹಿಂದೆ ಕಾಂಗ್ರೆಸ್ ಶಾಸಕರ ಪರಿಶ್ರಮ ಅಗಾಧವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ನಾಗಠಾಣ ಶಾಸಕ ವಿಠಲ ಕಟಕದೊಂಡ ಸೇರಿದಂತೆ ಹಲವು ನಾಯಕರು ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದ ಪರಿಣಾಮ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿದ್ದರಿಂದಾಗಿ ಇದೀಗ ಒಪ್ಪಿಗೆ ಸಿಕ್ಕಿದೆ ಎಂದು ಭಾನುವಾರ ಸುದ್ದಿಗೋಷ್ಠಿ ಅವರು ತಿಳಿಸಿದರು.

ಕೇಂದ್ರ ಜಲಶಕ್ತಿ ಸಚಿವಾಲಯ ಕಾಲುವೆ ನವೀಕರಣಕ್ಕಾಗಿ 2666.70 ಕೋಟಿ ರೂಪಾಯಿ ಅನುದಾನ ನೀಡುವುದಕ್ಕೆ ಸಮ್ಮತಿಸಿದ್ದು, ಇದರ ಹಿಂದೆ ಕೇವಲ ಸಂಸದ ರಮೇಶ ಜಿಗಜಿಣಗಿ ಅವರೊಬ್ಬರದ್ದೇ ಪಾತ್ರವಿಲ್ಲ; ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಹ ಪತ್ರ ಬರೆದು ಒತ್ತಾಯಿಸಿದ ಪರಿಣಾಮ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಡಿಪಿಆರ್ ಕೂಡ ಸಿದ್ಧಪಡಿಸಿ ಕಳುಹಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕಾಲುವೆ ನವೀಕರಣ ಕಾಮಗಾರಿ ಅಚ್ಚುಕಟ್ಟಾಗಿ ನಡೆಯಲಿದೆ ಎಂದರು.

ಕೇಂದ್ರ ಜಲಶಕ್ತಿ ಸಚಿವಾಲು ಡಿಪಿಆರ್ ಸಿದ್ಧಪಡಿಸುವಂತೆ ತಿಳಿಸುವವರೆಗೂ ಸಂಸದ ರಮೇಶ ಜಿಗಜಿಣಗಿ ಅವರಿಗೆ ಕಾಲುವೆಯ ಸಂಗತಿಯೇ ಗೊತ್ತಿರಲಿಲ್ಲ. ಯಾವಾಗ ಪ್ರಸ್ತಾವನೆಗೆ ಸಚಿವಾಲಯ ಅಸ್ತು ಎಂದಿತೋ ಆಗ ರಮೇಶ ಜಿಗಜಿಣಗಿ ಅವರ ರಂಗಪ್ರವೇಶವಾಗಿದೆ. ಅಲ್ಲಿಯವರೆಗೆ ಜಿಗಜಿಣಗಿ ಅವರಿಗೆ ಆ ಕುರಿತು ಯಾವುದೇ ಮಾಹಿತಿ ಇರಲಿಲ್ಲ ಎಂದ ಗಣಿಹಾರ ಅವರು, ಹದಿನೈದು ವರ್ಷಗಳ ಕಾಲ ಲೋಕಸಭೆ ಸದಸ್ಯರಿರುವ ಜಿಗಜಿಣಗಿ ಅವರು ಇಪ್ಪತ್ತು ವರ್ಷಗಳಿಂದ ಹಾಳಾಗಿರುವ ಕಾಲುವೆ ನವೀಕರಣಕ್ಕೆ ಶ್ರಮಿಸಲಿಲ್ಪವೇಕೆ? ಹಿಂದಿನ ಬಿಜೆಪಿ ಶಾಸಕರು ಪ್ರಸ್ತಾವನೆ ಸಲ್ಲಿಸಲಿಲ್ಲವೇಕೆ? ಎಂದು ಪ್ರಶ್ನಿಸಿದರು.

ಗುತ್ತಿ ಬಸವಣ್ಣ ಏತನೀರಾವರಿ ಯೋಜನೆಯ ನಾಲ್ಕು ಮೋಟರ್ ಸುಟ್ಟರೂ ಬಿಜಪಿ ಸರ್ಕಾರ ರಿಪೇರಿಗೊಳಿಸಲಿಲ್ಲ. ಬಿಜೆಪಿ ಶಾಸಕರಿಗೆ ಒತ್ತಾಯಿಸಿದರೂ ಪ್ರಯೋಜನವಾಗಲಿಲ್ಲ. ಬಿಜೆಪಿ ಸರ್ಕಾರ ಕಣ್ಣೆತ್ತಿಯೋ ನೋಡಲಿಲ್ಲ. ತಾಂಬಾದಲ್ಲಿ ತಿಂಗಳಾನುಗಟ್ಟಲೆ ಉಪವಾಸ ಕುಳಿತರೂ ಕ್ಯಾರೆ ಎನ್ನಲಿಲ್ಲ. ರೈತರ ಬೇಡಿಕೆ ಈಡೇರಿಸಲು ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಬೇಕಾಯಿತು ಎಂದರು.

ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಜಿಗಜಿಣಗಿ ಅವರು ಇತ್ತೀಚೆಗೆ ಮುತ್ಸದ್ದಿತನ ಕಳೆದುಕೊಳ್ಳುತ್ತಿದ್ದಾರೆ. ಪ್ರಚೋದನೆ ಗೆ ಒಳಗಾಗಿ ಸುಳ್ಳು ಹೇಳುತ್ತಿದ್ದಾರೆ. ಹೊನಗನಹಳ್ಳಿ ರೈಲ್ವೆ ಸೇತುವೆ ಉದ್ಘಾಟನೆ ಪಕ್ಷದ ಕಾರ್ಯಕ್ರಮವಾಗಿ ಮಾರ್ಪಡಿಸಿದರು. ಶಿಷ್ಟಾಚಾರ ಉಲ್ಲಂಘಿಸಿದರು. ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಮಾಡಬೇಕಾದ ಕಾರ್ಯಕ್ರಮ ಬಿಜೆಪಿ ಪಕ್ಷದ ಹಣದಲ್ಲಿಯೇ ಸೇತುವೆ ನಿರ್ಮಿಸಿದಂತೆ ಮಾಡಿದರೆಂದು ಟೀಕಿಸಿದರು.

ಮುಖಂಡರಾದ ವಸಂತ ಹೊನಮೋಡೆ ಹಾಗೂ ನಾಗರಾಜ ಲಂಬು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net