IND vs PAK ಪಂದ್ಯದ ಶೇ.50ರಷ್ಟು ಟಿಕೆಟ್ ಇನ್ನೂ ಖರೀದಿಯಾಗಿಲ್ಲ! ಈ 2 ವಿಷಯವೇ ಕೊಳ್ಳದಿರಲು ಕಾರಣ

Untitled design (16)
Published on

IND vs PAK Tickets: ನಿನ್ನೆಯಷ್ಟೇ ಯುಎಇ ವಿರುದ್ಧ ಅತ್ಯಂತ ಸುಲಭ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, 9 ವಿಕೆಟ್​ಗಳ ಅಂತರದಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದು ಬೀಗಿತು. ಈ ಮಧ್ಯೆ ಕ್ರಿಕೆಟ್​ ಪ್ರಿಯರು ತೀವ್ರ ಕುತೂಹಲದಿಂದ ಕಾಯುತ್ತಿರುವ ಸೆ.14ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್​ಗಳು ಇನ್ನೂ ಖರೀದಿಯಾಗಿಲ್ಲ. ಈ ಹೈವೋಲ್ಟೇಜ್ ಮ್ಯಾಚ್​ಗೆ ಸಾಕ್ಷಿಯಾಗಬೇಕಿದ್ದ ಅಭಿಮಾನಿಗಳೇ ಟಿಕೆಟ್​ ಖರೀದಿಸಲು ಹಿಂದೇಟು ಹಾಕಿರುವುದು ಸದ್ಯ ಭಾರೀ ಆಶ್ಚರ್ಯಕ್ಕೆ ಕಾರಣವಾಗಿದೆ. ಅದರಲ್ಲೂ ಪಂದ್ಯಕ್ಕೆ ಇನ್ನೆರೆಡು ದಿನಗಳು ಬಾಕಿ ಉಳಿದಿರುವಾಗಲೇ ಹೀಗೆ ಎಂಬುದು ಗೊಂದಲ ಹುಟ್ಟುಹಾಕಿದೆ.

ಶೇ.50ರಷ್ಟು ಟಿಕೆಟ್​ಗಳು ಬಾಕಿ!

ಮೊದಲೇ ಭಾರತ ಮತ್ತು ಪಾಕ್ ಪಂದ್ಯಕ್ಕೆ ಭಾರೀ ನಿರೀಕ್ಷೆಯಿದೆ. ಹೀಗಿರುವಾಗ, ಪಂದ್ಯದ ಟಿಕೆಟ್​ ಬೆಲೆ ಸಾಮಾನ್ಯವಾಗಿ ದುಬಾರಿ ಇರಲಿದೆ. ಅಂದರೆ, ಕೈಗೆಟುಕುವ ದರಕ್ಕಿಂತ ಮೀರಿದ್ದು. ಒಂದಷ್ಟು ಟಿಕೆಟ್​ಗಳು ಕಡಿಮೆ ಬೆಲೆಗೆ ಸಿಕ್ಕರೆ, ಅದಕ್ಕಿಂತ ಮತ್ತೊಂದು ದರ್ಜೆಯ ಟಿಕೆಟ್​ ಬೆಲೆಯು ಬರೋಬ್ಬರಿ 2.5 ಲಕ್ಷ ರೂ. ತಲುಪಿದೆ. ಇದೇ ಅಭಿಮಾನಿಗಳನ್ನು ಖರೀದಿಯಿಂದ ಹಿಂದೆ ಸರಿಯುವಂತೆ ಮಾಡಿದೆ ಎಂಬುದು ಮೊದಲ ಕಾರಣ.

ಎರಡನೇ ಕಾರಣ

ಪಹಲ್ಗಾಮ್​ ಉಗ್ರರ ದಾಳಿಗೆ ಪಾಕ್​ ಮೇಲೆ ಸೇಡು ತೀರಿಸಿಕೊಂಡ ಭಾರತ, ಪಾಪಿಸ್ತಾನದ ಉಗ್ರರ ನೆಲೆಯನ್ನು ಛಿದ್ರಗೊಳಿಸುವ ಮೂಲಕ ಪಾಪಿಗಳನ್ನು ಬಲಿಪಡೆಯಿತು. ಇದಾದ ಬಳಿಕ ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ, ವಹಿವಾಟು ನಡೆಸದಂತೆ ಎಲ್ಲ ಸಂಪರ್ಕವನ್ನು ಕಡಿತಗೊಳಿಸದ ಭಾರತ, ಕ್ರಿಕೆಟ್​ ಆಡುವುದನ್ನೂ ಸಹ ಬಹಿಷ್ಕರಿಸಿತು. ಹೀಗಿರುವಾಗಲೇ, ಬಿಸಿಸಿಐ ಪಾಕ್​ ಜತೆಗೆ ಟೀಮ್ ಇಂಡಿಯಾ ಏಷ್ಯಾಕಪ್ ಪಂದ್ಯ ಆಡುತ್ತಿದೆ ಎಂದು ಖಚಿತಪಡಿಸಿದ್ದು, ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿದೆ. ನಮ್ಮ ವೈರಿಗಳೊಂದಿಗೆ ಆಡುವುದು ಬೇಡ ಎಂದಿದ್ದ ಫ್ಯಾನ್ಸ್​ ಮಾತನ್ನೇ ಪರಿಗಣಿಸದ ಬಿಸಿಸಿಐ ವಿರುದ್ಧ ಕೋಪಗೊಂಡಿರುವ ಭಾರತೀಯ ಕ್ರಿಕೆಟ್​ ಪ್ರೇಮಿಗಳು, ಸ್ಟೇಡಿಯಂನಲ್ಲಿ ಪಂದ್ಯ ನೋಡಲು ನಿರಾಕರಿಸಿದ್ದಾರೆ. ಇದು ಟಿಕೆಟ್​ಗಳು ಖರೀದಿ ಆಗದಿರಲು ಇರುವ ಮತ್ತೊಂದು ಕಾರಣ ಎನ್ನಲಾಗಿದೆ.

ರೋಹಿತ್-ಕೊಹ್ಲಿ ಅನುಪಸ್ಥಿತಿ

“ಪಂದ್ಯಗಳ ಮಾರಾಟದ ಹರಿವು ಬಹಳ ಕಡಿಮೆಯಾಗಿದೆ ಎಂಬ ವಿಚಾರ ತಿಳಿದು ಸ್ವತಃ ನಮಗೆ ಆಶ್ಚರ್ಯವಾಗಿದೆ. ನಾವು ಕಡಿಮೆ ಸ್ಟ್ಯಾಂಡ್‌ಗಳೊಂದಿಗೆ ಮಾತ್ರ ಸೋಲ್ಡ್ ಔಟ್ ಆಗಿದ್ದೇವೆ. ಆದರೆ, ಅದರ ಮೇಲಿನ ದರ್ಜೆಯ ಟಿಕೆಟ್​ಗಳು ಖರೀದಿಯಾಗದೆ ಇನ್ನೂ ಬಾಕಿ ಉಳಿದಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೇ ದಿನದಲ್ಲಿ ಎರಡು ಬಾರಿ ನಾವು ಟಿಕೆಟ್ ವಿಂಡೋವನ್ನು ಮಧ್ಯಾಹ್ನ 2 ಮತ್ತು ಸಂಜೆ 4 ಗಂಟೆಗೆ ತೆರೆದಿದ್ದೆವು. ಮತ್ತು ಆ ಸಮಯದಲ್ಲಿ ನಮ್ಮ ಟಿಕೆಟ್‌ಗಳು 4 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ತಿ ಸೋಲ್ಡ್ ಔಟ್ ಆಗಿತ್ತು. ಆದರೆ, ಈ ಬಾರಿ ಕ್ರೇಜ್ ಕುಸಿದಿದೆ. ಇದಕ್ಕೆ ರೋಹಿತ್ ಮತ್ತು ವಿರಾಟ್ ಅನುಪಸ್ಥಿತಿಯು ಕಾರಣವಿರಬಹುದು” ಎಂದು ಎಮಿರೇಟ್ಸ್ ಕ್ರಿಕೆಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net