More

    ಹತ್ತೂ ಲೀಗ್​ ಗೆದ್ದ ಭಾರತಕ್ಕೆ ಹೆಡ್​ಏಕ್​ ಆದ ಟ್ರಾವಿಸ್ ಶತಕ! ಗೆಲುವಿನತ್ತ ಕಾಂಗರೂ​ ಪಡೆ

    ಅಹಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ನೀಡಿರುವ 241 ರನ್​ಗಳ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ಟ್ರಾವಿಸ್​ ಹೆಡ್​ ಆಕರ್ಷಕ ಶತಕದ ನೆರವಿನಿಂದ ಗೆಲುವಿನ ಕಡೆ ದಾಪುಗಾಲು ಇಟ್ಟಿದೆ.

    ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್​ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್​, ಆಸಿಸ್​ ಗೆಲುವಿನ ಆಸೆಯನ್ನು ಚಿಗುರಿಸಿದರು. ಭಾರತೀಯ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಹೆಡ್​, ಅಕ್ಷರಶಃ ಕಾಡಿದರು. ಆರಂಭದಲ್ಲಿ ಅಬ್ಬಿರಿಸಿದ ಟೀಮ್​ ಇಂಡಿಯಾ ಬೌಲರ್​ಗಳು ನಂತರದಲ್ಲಿ ಹೆಡ್​ ಆಟದ ಮುಂದೆ ಮಂಕಾದರು.

    ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಸಹ ಉತ್ತಮ ಜತೆಯಾಟವಾಡಿದರು. ಈ ಜೋಡಿ ನಿರ್ಣಾಯಕ ಘಟ್ಟದಲ್ಲಿ ನೂರಕ್ಕೂ ಅಧಿಕ ರನ್​ಗಳ ಜತೆಯಾಟವಾಡಿದರು. ಈ ಮೂಲಕ ಭಾರತದಿಂದ ವಿಜಯಲಕ್ಷ್ಮೀಯನ್ನು ತಮ್ಮತ್ತ ಕಸಿದುಕೊಳ್ಳುತ್ತಿದ್ದಾರೆ.

    ಆರಂಭದಲ್ಲಿ ಮೊಹಮ್ಮದ್​ ಶಮಿ ಮತ್ತು ಜಸ್​ಪ್ರೀತ್​ ಬುಮ್ರಾ ತಮ್ಮ ಬೌಲಿಂಗ್​ನಲ್ಲಿ ಕಮಾಲ್​ ಮಾಡಿದರು. ಆದರೆ, ಈಗ ಆಸಿಸ್​ ವಿಕೆಟ್​ ಪಡೆಯಲು ಭಾರತೀಯ ಬೌಲರ್​ಗಳು ತಿಣುಕಾಡುತ್ತಿದ್ದಾರೆ. ತಂಡದ ಮೊತ್ತ 16 ರನ್​ ಇದ್ದಾಗ 7 ರನ್​ ಗಳಿಸಿದ್ದ ಡೇವಿಡ್​ ವಾರ್ನರ್​ ಮೊಹಮ್ಮದ್​ ಶಮಿ ಓವರ್​ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ನಾನೇನು ಕಮ್ಮಿ ಎನ್ನುವಂತೆ ನಿರ್ಣಾಯಕ ಪಂದ್ಯದಲ್ಲಿ ಮಾರಕ ಬೌಲಿಂಗ್​ ದಾಳಿ ಮಾಡಿದ ಬುಮ್ರಾ, ಮಿಚೆಲ್​ ಮಾರ್ಷ್​ (15) ಮತ್ತು ಸ್ಟೀವ್​ ಸ್ಮಿತ್​ (4) ಅವರನ್ನು ಬಂದಷ್ಟೇ ವೇಗವಾಗಿ ಪೆವಿಲಿಯನ್​ ಅಟ್ಟಿದರು. ಕೇವಲ 43 ರನ್​ಗೆ ಪ್ರಮುಖ 3 ವಿಕೆಟ್​ ಕಳೆದುಕೊಳ್ಳುವ ಮೂಲಕ ಆಸಿಸ್​ ಪಡೆ ಇದೀಗ ಸಂಕಷ್ಟಕ್ಕೆ ಸಿಲುಕಿತು. ಆದರೆ, ಹೆಡ್​ ಮತ್ತು ಲಬುಶೇನ್​ ಕ್ರೀಸ್​ ಕಚ್ಚಿಕೊಂಡಿದ್ದು ಭಾರತದಿಂದ ಗೆಲುವನ್ನು ಕಸಿದುಕೊಳ್ಳುತ್ತಿದ್ದಾರೆ.

    ಸದ್ಯ ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್​ ಹೆಡ್ ಮತ್ತು ಮಾರ್ನಸ್​ ಲಬುಶೇನ್​​ ಕ್ರೀಸ್​ನಲ್ಲಿದ್ದಾರೆ. 35 ಓವರ್​ ಮುಕ್ತಾಯಕ್ಕೆ ಆಸಿಸ್​ ಪಡೆ 3 ವಿಕೆಟ್​ ನಷ್ಟಕ್ಕೆ 192 ರನ್​ ಕಲೆಹಾಕಿದೆ.

    ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಭಾರತ ನಿಗದಿತ 50 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಭಾರತ 240 ರನ್​ ಕಲೆಹಾಕಿತು. ಈ ಮೂಲಕ ಆಸಿಸ್​ ಗೆಲುವಿಗೆ 241 ರನ್​ಗಳ ಗುರಿ ನೀಡಿದೆ. ತಂಡದ ಪರ ಶುಭಮಾನ್​ ಗಿಲ್​ ಮತ್ತು ರೋಹಿತ್​ ಶರ್ಮ ಆರಂಭಿಕರಾಗಿ ಕಣಕ್ಕಿಳಿದರು. ತಂಡದ ಮೊತ್ತ 30 ಆಗಿದ್ದಾಗ 4 ರನ್​ ಗಳಿಸಿದ್ದ ಗಿಲ್​, ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇತ್ತ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್​ ನೆರವಿನೊಂದಿಗೆ 47 ರನ್​ ಗಳಿಸಿ ಸ್ಫೋಟಕ ಆಟವಾಡುತ್ತಿದ್ದ ರೋಹಿತ್​, ಅರ್ಧ ಶತಕಕ್ಕೆ ಇನ್ನೂ ಮೂರು ರನ್​ ಬಾಕಿ ಇರುವಾಗಲೇ ಮಿಚೆಲ್​ ಸ್ಟಾರ್ಕ್​ ಓವರ್​ನಲ್ಲಿ ಆ್ಯಡಂ ಜಂಪಾಗೆ ಕ್ಯಾಚಿತ್ತು ಪೆವಲಿಯನ್​ಗೆ ಮರಳಿದರು. ಇದರಿಂದ ತಂಡಕ್ಕೆ ಕೊಂಚ ಹಿನ್ನಡೆಯಾಯಿತು.

    ವಿರಾಟ್​ ಕೊಹ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್​ ಕಟ್ಟಿದರೆ, ಸಮಿಫೈನಲ್​ನಲ್ಲಿ ಸ್ಫೋಟಕ ಶತಕದೊಂದಿಗೆ ಅಬ್ಬರಿಸಿ ಬೊಬ್ಬಿರಿದಿದ್ದ ಶ್ರೇಯಸ್​ ಅಯ್ಯರ್​ ಕೇವಲ 4 ರನ್​ಗಳಿಗೆ ಔಟಾಗಿದ್ದು, ಭಾರತಕ್ಕೆ ಭಾರೀ ಆಘಾತವಾಯಿತು. ಅಲ್ಲದೆ, ಕೇವಲ 81 ರನ್​ಗೆ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಕೊಹ್ಲಿ ಮತ್ತು ರಾಹುಲ್​ ಜತೆಗೂಡಿ ಉತ್ತಮ ಜತೆಯಾಟದ ಮುನ್ಸೂಚನೆ ನೀಡಿದರು. ಆದರೆ, 64 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 54 ರನ್​ ಗಳಿಸಿ ಭರವಸೆ ಮೂಡಿಸಿದ್ದ ಕೊಹ್ಲಿ, ಔಟಾಗುವ ಮೂಲಕ ಭಾರತಕ್ಕಿದ್ದ ಬಹುದೊಡ್ಡ ಭರವಸೆ ಮಂಕಾಯಿತು. ಈ ಜೋಡಿ 68 ರನ್​ಗಳ ಜತೆಯಾಟ ನೀಡಿತ್ತು.

    ಬಳಿಕ ಬಂದ ರವೀಂದ್ರ ಜಡೇಜಾ ಕೇವಲ 9 ರನ್​ಗೆ ವಿಕೆಟ್​ ಒಪ್ಪಿಸಿ, ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ಮರಳಿದರು. 107 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 66 ರನ್​ಗಳಿಸಿ ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದ ರಾಹುಲ್​ಗೆ ಮಿಚೆಲ್​ ಸ್ಟಾರ್ಕ್​ ಪೆವಿಲಿಯನ್​ ಹಾದಿ ತೋರಿದರು. ನೆದರ್ಲೆಂಡ್​ ವಿರುದ್ಧದ ಲೀಗ್​ ಪಂದ್ಯದಲ್ಲಿ ಕೇವಲ 64 ಎಸೆತಗಳಲ್ಲಿ 102 ರನ್​ ಗಳಿಸಿದ್ದ ರಾಹುಲ್​, ಈ ಪಂದ್ಯದಲ್ಲಿ 107 ಎಸೆತಗಳಲ್ಲಿ 66 ರನ್​ ಗಳಿಸಿದರು. ಆಸಿಸ್​ ಬೌಲರ್​ಗಳನ್ನು ಎದುರಿಸಲು ರಾಹುಲ್​ ತಡಕಾಡಿದರು.

    ಉಳಿದಂತೆ ಮೊಹಮ್ಮದ್​ ಶಮಿ 6 ರನ್​ ಗಳಿಸಿದರೆ, ಜಸ್​ಪ್ರೀತ್​ ಬೂಮ್ರಾ 1, ಸೂರ್ಯಕುಮಾರ್​ ಯಾದವ್​ 18 ಹಾಗೂ ಕುಲದೀಪ್​ ಯಾದವ್ 10 ರನ್ ಗಳಿಸಿ ಔಟಾದರೆ, ಮೊಹಮ್ಮದ್​ ಸಿರಾಜ್​ 9 ರನ್​ ಗಳಿಸಿ ಅಜೇಯರಾಗಿ ಉಳಿದರು.

    ನಿರ್ಣಾಯಕ ಪಂದ್ಯದಲ್ಲಿ ಆಸಿಸ್​ ಪರ ಮಾರಕ ಬೌಲಿಂಗ್​ ದಾಳಿ ಮಾಡಿದ ಮಿಚೆಲ್​ ಸ್ಟಾರ್ಕ್​ ಪ್ರಮುಖ 3 ವಿಕೆಟ್​ ಕಬಳಿಸಿ ಮಿಂಚಿದರು. ನಾಯಕ ಪ್ಯಾಟ್​ ಕ್ಯುಮಿನ್ಸ್​ ಹಾಗೂ ಜೋಶ್​ ಹಜಾಲ್​ವುಡ್​ ತಲಾ 2 ವಿಕೆಟ್​ ಪಡೆದರೆ, ಗ್ಲೇನ್​ ಮ್ಯಾಕ್ಸ್​ವೆಲ್​ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್​ ಪಡೆದರು. ಕುಲದೀಪ್​ ಯಾದವ್​ ರನೌಟ್​ಗೆ ತುತ್ತಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts