

ಆಸ್ಟ್ರೇಲಿಯಾ: ಇಂದು (ಅ.25) ಸಿಡ್ನಿಯಲ್ಲಿ ನಡೆಯುತ್ತಿರುವ ಆತಿಥೇಯ ಆಸೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಫೀಲ್ಡಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ, ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗದಿರಲು ಭಾರೀ ಪೈಪೋಟಿಗಿಳಿದಿದೆ.
ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ, ಈಗಾಗಲೇ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಆದರೆ, ಮೂರನೇ ಪಂದ್ಯವನ್ನು ಗೆದ್ದರೆ, ಕ್ಲೀನ್ ಸ್ವೀಪ್ ಟೀಕೆಯಿಂದ ಬಚಾವ್ ಆಗುವ ಅವಕಾಶವಿದೆ. ಇದೇ ನಿಟ್ಟಿನಲ್ಲಿ ಇಂದಿನ ಪಂದ್ಯದಲ್ಲಿ ಆಸೀಸ್ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಮುಂದಿರುವ ಟೀಮ್ ಇಂಡಿಯಾ, ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದೆ. ಸ್ಟಾರ್ ಬ್ಯಾಟರ್ ಅನ್ನು ಸುಲಭವಾಗಿ ರನ್ಔಟ್ ಮಾಡುವ ಅವಕಾಶವನ್ನು ಹೊಂದಿದ್ದ ಗಿಲ್, ವಿಕೆಟ್ ಉರುಳಿಸುವಲ್ಲಿ ವಿಫಲವಾಗಿದ್ದು ದೃಶ್ಯದಲ್ಲಿ ಸೆರೆಯಾಗಿದೆ.
ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಕವರ್ಸ್ ಕಡೆಗೆ ಶಾಟ್ ಆಡಿದ ಮ್ಯಾಥ್ಯೂ ಶಾರ್ಟ್, ಒಂದು ರನ್ಗೆ ಓಡುವಾಗ ಮತ್ತೊಂದು ರನ್ ತಗೋಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದರು. ಒಂದು ಸೆಕೆಂಡ್ ನಿಂತು ಮತ್ತೆ ಕ್ರೀಸ್ ಕಡೆಗೆ ಓಡಿದ ಶಾರ್ಟ್ರನ್ನು ಔಟ್ ಮಾಡಲು ಗಿಲ್ಗೆ ಉತ್ತಮ ಅವಕಾಶವಿತ್ತು. ಈ ವೇಳೆ, ನಾನ್-ಸ್ಟ್ರೈಕರ್‌ನ ತುದಿಯಲ್ಲಿ ವಿಕೆಟ್‌ಗಳ ಕಡೆಗೆ ಗಿಲ್ ಚೆಂಡು ಎಸೆದರು. ಆದರೆ, ಅದು ವಿಕೆಟ್‌ಗಳಿಗೆ ತಲುಪಲಿಲ್ಲ. ಅಸಲಿಗೆ, ಶಾರ್ಟ್ ಇನ್ನೂ ಕ್ರೀಸ್ ತಲುಪಿರಲಿಲ್ಲ.
ಪಂದ್ಯ ವೀಕ್ಷಿಸುತ್ತಿದ್ದ ಕಮೆಂಟೇಟರ್ ರವಿಶಾಸ್ತ್ರಿ, ಒಂದು ನಿಮಿಷ ಆಶ್ಚರ್ಯ ವ್ಯಕ್ತಪಡಿಸಿದರು. ಇದು ಖಂಡಿತವಾಗಿಯೂ ರನ್ ಔಟ್ ಆಗಬೇಕಿತ್ತು. ವಿಕೆಟ್ ಕೀಳಲು ಗಿಲ್ಗೆ ಹೆಚ್ಚು ಸಮಯ ಸಿಕ್ಕಿತ್ತು ಎಂದು ಅವರು ಹೇಳಿದರು. ಇದರ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪಂದ್ಯ ಗೆಲ್ಲಬೇಕಾದರೆ ಈ ರೀತಿಯ ಅವಕಾಶಗಳನ್ನು ಮಿಸ್ ಮಾಡಬಾರದು ಎಂದು ಕ್ರಿಕೆಟ್ ಪ್ರಿಯರು ಅಭಿಪ್ರಾಯಿಸಿದ್ದಾರೆ.
ಇನ್ನು ಟೀಮ್ ಇಂಡಿಯಾ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿರುವ ಹರ್ಷಿತ್ ರಾಣಾ, 4 ಬಹುಮುಖ್ಯ ವಿಕೆಟ್ಗಳನ್ನು ಕಬಳಿಸುವ ಮೂಲಕ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ವಿಶ್ವಾಸ ಗಳಿಸುವಲ್ಲಿ ಇನ್ನಷ್ಟು ಹತ್ತಿರವಾಗಿದ್ದಾರೆ. ಈ ಹಿಂದೆ ರಾಣಾ ಗೌತಿಗೆ ಅಚ್ಚುಮೆಚ್ಚು. ಹೀಗಾಗಿಯೇ, ರಾಣಾ ಉತ್ತಮ ಪ್ರದರ್ಶನ ನೀಡದಿರಲಿ, ಅವರಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿತ್ತು. ಈ ಮಾತುಗಳಿಗೆ ಉತ್ತಮ ಪ್ರದರ್ಶನದ ಮೂಲಕ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ರ ಮಾತಿಗೆ ರಾಣಾ ತಿರುಗೇಟು ಕೊಟ್ಟಂತಿದೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).