ರೈಲು ಹಳಿ ಮೇಲೆ ಪರಲೋಕ ಪಯಣ: ಹೆಚ್ಚಿದ ಆತ್ಮಹತ್ಯೆ-ಅಪಘಾತ; 4 ವರ್ಷದಲ್ಲಿ 4,872 ಜನರು ಬಲಿ

Suicide F
Published on

| ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

ರಾಜ್ಯದ ರೈಲು ಹಳಿಗಳೀಗ ಸಾವಿನ ರಹದಾರಿ ಆಗಿ ಮಾರ್ಪಡುತ್ತಿವೆ. ಕಳೆದ 4 ವರ್ಷದಲ್ಲಿ ಬರೋಬ್ಬರಿ 4,872 ಜನ ಆತ್ಮಹತ್ಯೆ, ಅಪಘಾತಗಳಿಂದ ಸಾವನ್ನಪ್ಪಿದ್ದಾರೆ. ಕೌಟುಂಬಿಕ ಕಲಹ, ಪ್ರೇಮ ವೈಫಲ್ಯ, ಆರ್ಥಿಕ ಸಂಕಷ್ಟ , ಉದ್ಯೋಗ ಸಮಸ್ಯೆಗಳ ಜತೆಗೆ ಇದೀಗ ಕರೊನಾತಂಕ ಕೂಡ ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಇನ್ನು ಹಳಿಗಳ ಮೇಲೆ ನಡೆಯುವ ಅವಘಡಗಳಲ್ಲಿ ವಲಸೆ ಕಾರ್ವಿುಕರು ಸಾವನ್ನಪು್ಪವುದೇ ಹೆಚ್ಚು. ಕೊಲೆ ಮಾಡಿ ಹಳಿ ಮೇಲೆ ಎಸೆದು ಹೋದಂತಹ ಪ್ರಕರಣಗಳೂ ಸಾಕಷ್ಟಿವೆ. ಕರೊನಾ ಪೂರ್ವದಲ್ಲಿ ರೈಲುಗಳ ಸಂಚಾರ ಅಧಿಕವಾಗಿತ್ತು. ಪ್ರತಿ ವರ್ಷ 1500ರಿಂದ 1600 ಜನ ಆತ್ಮಹತ್ಯೆ, ಅಪಘಾತ ಮತ್ತಿತರ ಕಾರಣಗಳಿಂದ ಸಾವನ್ನಪು್ಪತ್ತಿದ್ದರು. ಕರೊನಾ ಲಾಕ್​ಡೌನ್ ನಂತರ ರೈಲುಗಳ ಸಂಚಾರ ವಿರಳವಾಗಿತ್ತಾದರೂ ಈ ವೇಳೆ ಸಹ ಹಳಿಗಳ ಮೇಲೆ ಸಂಭವಿಸಿದ ಸಾವಿನ ಸಂಖ್ಯೆ 800ರ ಗಡಿ ದಾಟಿದೆ.

ಪುರುಷರೇ ಹೆಚ್ಚು: ರೈಲು ಹಳಿ ಮೇಲಿನ ಆತ್ಮಹತ್ಯೆ, ಆಕಸ್ಮಿಕ ಅವಘಡ ಪ್ರಕರಣಗಳಲ್ಲಿ ಸಾವನ್ನಪು್ಪವವರಲ್ಲಿ ಪುರುಷರ ಸಂಖ್ಯೆ ಶೇ.70ಕ್ಕೂ ಹೆಚ್ಚಿದೆ. 2019ರಲ್ಲಿ ಸಾವನ್ನಪ್ಪಿದ 1657 ಜನರಲ್ಲಿ 1378 ಪುರುಷರು ಹಾಗೂ 279 ಮಹಿಳೆಯರು ಇದ್ದಾರೆ. 2020ರಲ್ಲಿ 858ರಲ್ಲಿ 765 ಜನ ಪುರುಷರು, 98 ಮಹಿಳೆಯರು ಸಾವನ್ನಪ್ಪಿದ್ದರು. 2021ರಲ್ಲಿ 656 ಪುರುಷರು ಹಾಗೂ 180 ಮಹಿಳೆಯರು ಮೃತಪಟ್ಟಿದ್ದಾರೆ.

ಆತ್ಮಹತ್ಯೆ ಪರಿಹಾರವಲ್ಲ: ಕಳೆದ ಎರಡು ದಶಕಗಳಿಂದ ಭಾರತದಲ್ಲಿ ರೈಲು ಪ್ರಯಾಣ ಪ್ರಯಾಣಿಕ ಸ್ನೇಹಿಯಾಗಿದ್ದು, ಆತ್ಯಾಧುನಿಕವಾಗಿ ಹಾಗೂ ಸುರಕ್ಷತಾ ಸಾರಿಗೆಯಾಗಿ ಸುಧಾರಣೆಗೊಂಡಿದೆ. ಹಾಗಿದ್ದೂ, ನಾನಾ ಕಾರಣಗಳಿಗೆ ರೈಲು ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ತಗ್ಗಿಸುವುದು ಸಾಧ್ಯವಾಗುತ್ತಿಲ್ಲ. ಮೊದಲನೆಯದಾಗಿ ಸಮಸ್ಯೆಗಳಿಗೆ ಸಾವೇ ಪರಿಹಾರವಲ್ಲ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ರೈಲ್ವೇ ಇಲಾಖೆ ಸಹ ಕಾವಲುರಹಿತ ಕ್ರಾಸಿಂಗ್​ಗಳನ್ನು ಶೂನ್ಯಕ್ಕಿಳಿಸುವುದು, ಕ್ರಾಸಿಂಗ್​ಗಳಲ್ಲಿ ಸುರಕ್ಷತಾ ವ್ಯವಸ್ಥೆ ಬಿಗಿಗೊಳಿಸುವುದು ಮೊದಲಾದ ಕ್ರಮಗಳ ಮೂಲಕ ಆಕಸ್ಮಿಕ ಅವಘಡಗಳು, ಅಪಘಾತಗಳನ್ನು ತಗ್ಗಿಸಬಹುದಾಗಿದೆ.

ರೈಲು ಹಳಿಗಳ ಮೇಲಿನ ಆತ್ಮಹತ್ಯೆ ಮತ್ತು ಅಪಘಾತ ತಡೆಯಲು ಮತ್ತಷ್ಟು ಯೋಜನೆಗಳನ್ನು ರೂಪಿಸುವಂತೆ ರೈಲ್ವೆ ಮಂಡಳಿಗೆ ಮನವಿ ಮಾಡಿದ್ದೇವೆ. ಹೆಚ್ಚು ಆತ್ಮಹತ್ಯೆಗಳು ಸಂಭವಿಸುವ ಸ್ಥಳದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.

| ಸಿರಿಗೌರಿ ಎಸ್​ಪಿ, ರೈಲ್ವೆ ಪೊಲೀಸ್

ಗುರುತು ಪತ್ತೆ ಸವಾಲು: ಕ್ಷಣಾರ್ಧದಲ್ಲಿ ಜೀವ ಕಳೆದುಕೊಳ್ಳ ಬೇಕೆಂಬ ಕಾರಣಕ್ಕಾಗಿ ಆತ್ಮಹತ್ಯೆಗೆ ನಿರ್ಧರಿಸುವ ಹಲವರು ರೈಲು ಹಳಿ ಮೇಲೆ ಮಲಗಿ ಸಾವನ್ನಪು್ಪತ್ತಾರೆ. ಹೀಗೆ ಸತ್ತವರ ದೇಹಗಳು ಛಿದ್ರವಾಗುವುದರಿಂದ ಮೃತದೇಹಗಳ ಗುರುತು ಪತ್ತೆ ರೈಲ್ವೆ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನೂ ಹಲವು ಸಂದರ್ಭದಲ್ಲಿ ಆತ್ಮಹತ್ಯೆಗಳನ್ನು ಲೋಕೊಪೈಲಟ್​ಗಳು (ರೈಲಿನ ಡ್ರೖೆವರ್) ಸಮಯ ಪ್ರಜ್ಞೆ ಮೆರೆದು ತಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net