

ನವದೆಹಲಿ: ಭಾರತದಲ್ಲಿ ಕಳೆದ ಹತ್ತು ವರ್ಷದಲ್ಲಿ ಶತಕೋಟ್ಯಧಿಪತಿಗಳ ಸಂಪತ್ತು ಮೂರು ಪಟ್ಟು ಏರಿಕೆಗೊಂಡಿದೆ. ಕೋವಿಡ್ ಮಹಾಮಾರಿ, ಮಾರುಕಟ್ಟೆ ಕುಸಿತದ ನಡುವೆಯೂ ದೇಶದ ಬಿಲಿಯನೇರ್ಗಳ ಸಂಪತ್ತು ಹೆಚ್ಚಿದೆ. ಭಾರತೀಯ ಬಿಲಿಯನೇರ್ಗಳ ಸಂಖ್ಯೆಯು ಕಳೆದ 10 ವರ್ಷಗಳಲ್ಲಿ 83ರಿಂದ 185ಕ್ಕೆ ಅಂದರೆ 123ರಷ್ಟು ಹೆಚ್ಚಾಗಿದೆ. ಆದರೆ ಅವರ ಸಂಪತ್ತು ಶೇ.263ರಷ್ಟು ಏರಿಕೆಯಾಗಿ 77 ಲಕ್ಷ ಕೋಟಿ ರೂ.ನಷ್ಟಿದೆ.
ಬಿಲಿಯನೇರ್ಗಳ ಸಂಪತ್ತಿನ ವಿಷಯದಲ್ಲಿ ಭಾರತವು ವಿಶ್ವದಲ್ಲಿ 3ನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಮಾತ್ರ ಭಾರತಕ್ಕಿಂತ ಮುಂದಿವೆ. ಯುಬಿಎಸ್ ಆಂಬೀಷನ್ ವರದಿಯ ಪ್ರಕಾರ, ಭಾರತ ಅಲ್ಲದೆ ವಿಶ್ವದ ಹಲವು ದೇಶಗಳ ಬಿಲಿಯನೇರ್ಗಳ ಸಂಪತ್ತು ಕೂಡ ಏರಿಕೆಯಾಗಿದೆ. ಚೀನೀ ಶತಕೋಟ್ಯಧಿಪತಿಗಳ ಸಂಪತ್ತು 2015 ಮತ್ತು 2020ರ ನಡುವೆ ವಾರ್ಷಿಕವಾಗಿ 20%ರಷ್ಟು ಹೆಚ್ಚಾಗಿದೆ. ಆದರೆ ಅದರ ನಂತರ ಅವರ ಸಂಪತ್ತು ಪ್ರತಿ ವರ್ಷ ಸುಮಾರು 5%ರಷ್ಟು ಕಡಿಮೆಯಾಗಿದೆ.
ಅಮೆರಿಕದಲ್ಲಿ ಶತಕೋಟ್ಯಧಿಪತಿಗಳ ಸಂಪತ್ತು 5 ವರ್ಷಗಳಲ್ಲಿ ಶೇ.58.5ರಷ್ಟು ಏರಿಕೆಯಾಗಿ 516 ಲಕ್ಷ ಕೋಟಿ ರೂ. ಮುಟ್ಟಿದೆ. ಆದರೆ 2015 ಮತ್ತು 2020ರ ನಡುವೆ ಇದು 52.7%ರಷ್ಟು ಏರಿಕೆಯಾಗಿ ಸುಮಾರು 322 ಲಕ್ಷ ಕೋಟಿ ರೂ. ದಾಖಲಾಗಿದೆ. ಪಶ್ಚಿಮ ಯುರೋಪ್ದಲ್ಲಿ ಶತಕೋಟ್ಯಧಿಪತಿಗಳ ಸಂಪತ್ತು 29%ರಷ್ಟು ಹೆಚ್ಚಾಗಿದೆ. ವಿಶ್ವದಲ್ಲಿ ಟೆಕ್ ಕ್ಷೇತ್ರದಿಂದ ಅತಿ ಹೆಚ್ಚು ಬಿಲಿಯನೇರ್ಗಳು ಹೊರಹೊಮ್ಮುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಅವರ ಸಂಪತ್ತು 67 ಸಾವಿರ ಕೋಟಿಯಿಂದ 203 ಲಕ್ಷ ಕೋಟಿ ರೂ.ಗೆ ಅಂದರೆ 3 ಪಟ್ಟು ಹೆಚ್ಚಾಗಿದೆ.
ಕೈಗಾರಿಕಾ ಬಿಲಿಯನೇರ್ಗಳು ಎರಡನೇ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಮೌಲ್ಯ 45 ಸಾವಿರ ಕೋಟಿ ರೂ.ಯಿಂದ 110 ಲಕ್ಷ ಕೋಟಿಗೆ ಏರಿಕೆಯಾಗಿದೆ. ಯುರೋಪಿನ ಪರಿಸ್ಥಿತಿ ಭಾರತ, ಚೀನಾ ಮತ್ತು ಅಮೆರಿಕಕ್ಕಿಂತ ಭಿನ್ನವಾಗಿತ್ತು. 2015 ಮತ್ತು 2020ರ ನಡುವೆ ಪಶ್ಚಿಮ ಯುರೋಪ್ನ ಬಿಲಿಯನೇರ್ಗಳ ಸಂಪತ್ತು ಶೇ.44ರಷ್ಟು ಏರಿಕೆಯಾಗಿ 178 ಲಕ್ಷ ಕೋಟಿ ರೂ.ಗೆ ತಲುಪಿದೆ. ಆದರೆ 2020-2024ರ ನಡುವೆ ಇದು ಕೇವಲ 29%ರಷ್ಟು ಏರಿಕೆಯಾಗಿ 228.6 ಲಕ್ಷ ಕೋಟಿ ರೂ. ಆಗಿದೆ.