ಬೈಂದೂರು: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂಬಿಕೆ, ಎಲ್‌ಸಿಆರ್‌ಪಿ ಹಾಗೂ ಕೃಷಿಸಖಿ ಮತ್ತು ಪಶುಸಖಿಯರ ವಾಸಿಕ ಗೌರವಧನವನ್ನು ಹೆಚ್ಚಳ ವಾಡಿ ಸರ್ಕಾರ ಆದೇಶ ಹೊರಡಿಸಿದೆ. ಆಗಸ್ಟ್‌ನಲ್ಲಿ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಈ ಬಗ್ಗೆ ಪ್ರಸ್ತಾಪಿಸಿ ಸದನದ ಗಮನ ಸೆಳೆದಿದ್ದರು. ಇದೀಗ ಸರ್ಕಾರ ಗೌರವಧನ ಹೆಚ್ಚಿಸಿ ಆದೇಶಿಸಿದ್ದು ಶಾಸಕ ಗುರುರಾಜ್ ಗಂಟಿಹೊಳೆ ಹರ್ಷ ವ್ಯಕ್ತಪಡಿಸಿದ್ದಾರೆ.
ಮುಖ್ಯ ಬರಹಗಾರರು (ಎಂಬಿಕೆ) ವಾಸಿಕವಾಗಿ ಪಡೆಯುತ್ತಿದ್ದ ಗೌರವಧನ 5000 ರೂ.ನಿಂದ 9,250ಕ್ಕೆ ಹೆಚ್ಚಿಸಲಾಗಿದೆ. ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ (ಎಲ್‌ಸಿಆರ್‌ಪಿ)ಗಳ ಗೌರವಧನ ಮೊತ್ತ 3500 ರೂ.ನಿಂದ 6,250ಗೆ ಹೆಚ್ಚಳ ಮಾಡಲಾಗಿದೆ. ಕೃಷಿಸಖಿ ಹಾಗೂ ಪಶುಸಖಿಯರ ವಾಸಿಕ ಗೌರವಧನವನ್ನು 3,750ರಿಂದ 4,500 ರೂ.ಗೆ ಏರಿಸಲಾಗಿದೆ. ಉಡುಪಿ ಜಿಲ್ಲೆಯ 155 ಗ್ರಾಪಂಗಳಲ್ಲಿ ಒಟ್ಟು 855 ಸಿಬ್ಬಂದಿಯಿದ್ದು ಅದರಲ್ಲಿ 155 ಎಂಬಿಕೆ, 401 ಎಲ್‌ಸಿಆರ್, 149 ಕೃಷಿಸಖಿ ಮತ್ತು 150 ಪಶುಸಖಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.