ಇನ್ನು ಮುಂದೆ ಸರ್ಕಾರದ ಕೈಸೇರಲಿವೆ ವಾಟ್ಸಾಪ್ ಹಾಗೂ ಇತರೆ ಆ್ಯಪ್​ಗಳು| Apps

Apps
Published on

Apps | ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025 ರ ಹೊಸ ಆದಾಯ ತೆರಿಗೆ ಮಸೂದೆಯನ್ನ ಏಕೆ ಪರಿಚಯಿಸಲಾಯಿತು ಎಂಬುದಕ್ಕೆ ಪ್ರತಿಕ್ರಿಯಿಸಿದ್ದಾರೆ. 1961 ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸುವ ಈ ಮಸೂದೆಯು ಸರ್ಕಾರಕ್ಕೆ ಲೆಕ್ಕವಿಲ್ಲದ ಹಣ ಮತ್ತು ಅಕ್ರಮ ಚಟುವಟಿಕೆಗಳನ್ನು ಗುರುತಿಸಲು ಸಹಾಯವಾಗುತ್ತದೆ. 2025 ರ ಹೊಸ ಆದಾಯ ತೆರಿಗೆ ಮಸೂದೆ ಡಿಜಿಟಲ್ ಸ್ವತ್ತುಗಳನ್ನು ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ (13) ರಂದು ಲೋಕಸಭೆಯಲ್ಲಿ 2025 ರ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಿದರು. ಇದು 1961 ರ ಹಳೆಯ ಆದಾಯ ತೆರಿಗೆ ನಿಯಮಗಳಿಗೆ ಬದಲಾವಣೆಗಳನ್ನು ಮಾಡುವುದರ ಜೊತೆಗೆ, ಪ್ರಸ್ತುತ ತಂತ್ರಜ್ಞಾನಕ್ಕೆ ಅನುಗುಣವಾಗಿ ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ.

ಆದಾಗ್ಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಆದಾಯ ತೆರಿಗೆ ಮಸೂದೆ 2025 ಅನ್ನು ಏಕೆ ಜಾರಿ ಮಾಡಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಿದ್ದಾರೆ. ಇದು ಹೆಚ್ಚಾಗಿ ಹೊಸ ನಿಯಮಗಳಿಗೆ ಅನುಗುಣವಾಗಿದೆ. ಭಾಷೆಯನ್ನು ಸರಳಗೊಳಿಸುವುದು ಮತ್ತು ಅನಗತ್ಯ ಕಾರ್ಯಾಚರಣೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಅಪರಾಧಿಗಳನ್ನು ಹಿಡಿಯಲು ಹೆಚ್ಚಿನ ಡಿಜಿಟಲ್ ಸಾಕ್ಷಿಗಳ ಹುಡುಕಾಟಕ್ಕೆ ಇದು ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ. ಹೊಸ ತಂತ್ರಜ್ಞಾನದೊಂದಿಗೆ ತೆರಿಗೆ ಜಾರಿಗೊಳಿಸಲು ಮತ್ತು ಕ್ರಿಪ್ಟೋಕರೆನ್ಸಿಗಳಂತಹ ವರ್ಚುವಲ್ ಸ್ವತ್ತುಗಳನ್ನು ಕಡೆಗಣಿಸದಂತೆ ನೋಡಿಕೊಳ್ಳಲು ಹೊಸ ಮಸೂದೆ ಸಹಾಯ ಮಾಡುತ್ತದೆ, ಡಿಜಿಟಲ್ ಖಾತೆಗಳಿಂದ ಬರುವ ಮಾಹಿತಿಗಳು ಅಧಿಕಾರಿಗಳಿಗೆ ನ್ಯಾಯಾಲಯದಲ್ಲಿ ತೆರಿಗೆ ವಂಚನೆಯನ್ನು ಸಾಬೀತುಪಡಿಸಲು ಮತ್ತು ತೆರಿಗೆ ವಂಚನೆಯ ಪ್ರಕರಣವನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಸಾಕ್ಷಿಗಳು ಸಿಗುತ್ತವೆ. ಲೆಕ್ಕವಿಲ್ಲದ ಕಪ್ಪು ಹಣವನ್ನು ಬಯಲು ಮಾಡುವಲ್ಲಿ ಡಿಜಿಟಲ್ ಫೋರೆನ್ಸಿಕ್ಸ್ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ.

Nirmala Sitharaman

ಮೊಬೈಲ್ ಫೋನ್‌ಗಳಲ್ಲಿ ಎನ್‌ಕ್ರಿಪ್ಟ್ ಮಾಡಲಾದ ಮೆಸೇಜ್​ಗಳ ಮೂಲಕ 250 ಕೋಟಿ ರೂ. ಲೆಕ್ಕವಿಲ್ಲದ ಹಣ ಪತ್ತೆಯಾಗಿದೆ. ಕ್ರಿಪ್ಟೋ ಸ್ವತ್ತುಗಳಿಗೆ ಸಂಬಂಧಿಸಿದ ವಾಟ್ಸಾಪ್ ಸಂದೇಶಗಳಿಂದ ನಮಗೆ ಸಾಕ್ಷಿಗಳು ಸಿಕ್ಕಿವೆ. ವಾಟ್ಸಾಪ್ ಸಂವಹನದ ಮೂಲಕ 200 ಕೋಟಿ ರೂ. ಲೆಕ್ಕವಿಲ್ಲದ ಹಣ ಪತ್ತೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು. ಅಕ್ರಮ ಹಣ ಬಚ್ಚಿಡಲು ಆಗಾಗ್ಗೆ ಭೇಟಿ ನೀಡುವ ಸ್ಥಳಗಳನ್ನು ಗುರುತಿಸಲು ಗೂಗಲ್ ನಕ್ಷೆಗಳ ಇತಿಹಾಸ ಸಹಾಯ ಮಾಡಿದೆ. ಅಕ್ರಮ ಆಸ್ತಿಯ ಮಾಲೀಕತ್ವವನ್ನು ಕಂಡುಹಿಡಿಯಲು ಇನ್‌ಸ್ಟಾಗ್ರಾಂ ಖಾತೆಗಳು ಸಹಾಯ ಮಾಡಿವೆ ಎಂದು ಎಂದು ಸೀತಾರಾಮನ್ ಹೇಳಿದ್ದಾರೆ.

ಅಧಿಕಾರಿಗಳು ಯಾವ ಖಾತೆಗಳನ್ನು ಪ್ರವೇಶಿಸಬಹುದು?

ಹೊಸ ಮಸೂದೆಯು ಅಧಿಕಾರಿಗಳಿಗೆ ವಾಟ್ಸಾಪ್, ಟೆಲಿಗ್ರಾಂ ಮತ್ತು ಇಮೇಲ್‌ಗಳಂತಹ ಡಿಜಿಟಲ್ ಸಂವಹನ ವೇದಿಕೆಗಳನ್ನು ಪ್ರವೇಶಿಸುವ ಹಕ್ಕನ್ನು ನೀಡುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ. ಇದರ ಜೊತೆಗೆ ಸರ್ಕಾರವು ಹಣಕಾಸಿನ ವಹಿವಾಟುಗಳನ್ನು ಮರೆಮಾಡಲು ಬಳಸುವ ಸಾಫ್ಟ್‌ವೇರ್ ಮತ್ತು ಸರ್ವರ್‌ಗಳನ್ನು ಸಹ ಪ್ರವೇಶಿಸಲು ಅವಕಾಶವಿದೆ ಎಂದಿದ್ದಾರೆ. ಇದು ಆದಾಯ ತೆರಿಗೆ ಅಧಿಕಾರಿಗಳು ತನಿಖೆಗಾಗಿ ಕೈಗೊಳ್ಳುವ ಕಾರ್ಯಾಚರಣೆಗಳ ಸಮಯದಲ್ಲಿ ಕೆಲಸ ಮಾಡಲು ಉಪಯುಕ್ತವಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net