

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡ್ನೂರು ಗ್ರಾಮದಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು, ಕಾಡಾನೆ ಹಾವಳಿ ತಡೆಗೆ ಕ್ರಮಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಈ ಭಾಗದ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಡ್ನೂರು ಗ್ರಾಮದ ಕೊಚ್ಚಿ ವ್ಯಾಪ್ತಿಗೆ ಮತ್ತೆ ಕಾಡಾನೆ ಲಗ್ಗೆ ಇಟ್ಟು ಕೃಷಿ ನಾಶ ಮಾಡಿದೆ. ಗುರುವಾರ ರಾತ್ರಿ ಕಾಡಾನೆ ಕೊಚ್ಚಿಯ ಕೃಷ್ಣಪ್ರಸಾದ್ ಅವರ ತೋಟಕ್ಕೆ ನುಗ್ಗಿ ಅಡಕೆ, ತೆಂಗು, ಬಾಳೆ ಕೃಷಿಗಳನ್ನು ನಾಶ ಮಾಡಿರುವುದಾಗಿ ತಿಳಿದು ಬಂದಿದೆ. ಕಳೆದ ಮಂಗಳವಾರ ರಾತ್ರಿ ಕಾಡಾನೆ ಪೂವಂದೂರಿನ ನಾರಾಯಣ ರಾವ್ ಅವರ ತೋಟಕ್ಕೆ ನುಗ್ಗಿ ತೆಂಗು, ಅಡಕೆ, ಬಾಳೆ ಇನ್ನಿತರ ಕೃಷಿಗಳನ್ನು ನಾಶ ಮಾಡಿತ್ತು. ಅದಕ್ಕೆ ಮೊದಲು ಕಾಡಾನೆ ಪೂವಂದೂರು ವ್ಯಾಪ್ತಿಯ ಸ್ವಾತಿ ಭಟ್, ನಿರ್ಮಲಾ ರಾವ್, ಮಹೇಶ್ ಪೂವಂದೂರು ಮತ್ತಿತರ ಕೃಷಿಕರ ತೋಟಗಳಿಗೆ ನುಗ್ಗಿ ಅಡಕೆ, ತೆಂಗು, ಬಾಳೆಗಿಡಗಳನ್ನು ನಾಶಗೊಳಿಸಿ ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿತ್ತು.
ಪ್ರತಿಭಟನೆಯ ಎಚ್ಚರಿಕೆ
ಮಾಡ್ನೂರು ಗ್ರಾಮದ ಪೂವಂದೂರು, ಅಮ್ಚಿನಡ್ಕ, ಅಂಕೋತಿಮಾರು, ಮುಖಾರಿಮೂಲೆ, ಚಾಕೋಟೆ, ಕೊಚ್ಚಿ, ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ, ನೂಜಿಬೈಲು ಸೇರಿದಂತೆ ವಿವಿಧ ಕಡೆಗಳಿಗೆ ಕಳೆದ 3 ತಿಂಗಳ ಅವಧಿಯಲ್ಲಿ 35ಕ್ಕೂ ಅಧಿಕ ಬಾರಿ ಕಾಡಾನೆಗಳು ಕೃಷಿ ಪ್ರದೇಶಗಳಿಗೆ ನುಗ್ಗಿ ರೈತರು ಬೆಳೆದ ಕೃಷಿಯನ್ನು ನಾಶ ಮಾಡಿವೆ. ಈ ವಿಚಾರವನ್ನು ಶಾಸಕ ಗಮನಕ್ಕೆ ತರಲಾಗುವುದು. ಅಲ್ಲದೆ ಈ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗುವುದು. ಮುಂದೆಯೂ ಯಾವುದೇ ಸ್ಪಂದನೆ ಸಿಗದಿದ್ದರೆ ರೈತರೆಲ್ಲರೂ ಸೇರಿಕೊಂಡು ಪ್ರತಿಭಟನೆಗಿಳಿಯುವುದಾಗಿ ಈ ಭಾಗದ ಕೃಷಿಕರು ಎಚ್ಚರಿಕೆ ನೀಡಿದ್ದಾರೆ.