

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಶ್ರೀ ರಾಮ ಸೆಕೆಂಡರಿ ಸ್ಕೂಲ್ನ ನೂತನ ಭವನ ಅಹಲ್ಯಾವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಬಳಿಕ 2024-25ನೇ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನಡೆಯಿತು.
ಅತಿಥಿಗಳು ಅಗ್ನಿಹೋತ್ರಕ್ಕೆ ಅಗ್ನಿ ಸ್ಪರ್ಶ ಮಾಡಿ ಘೃತಾಹುತಿ ನೀಡಿ, ದೀಪ ಪ್ರಜ್ವಲಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ನಡೆಸಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ತಿಲಕಧಾರಣೆ ಮಾಡುವುದರ ಮೂಲಕ ಸ್ವಾಗತಿಸಲಾಯಿತು.
ವಿದ್ಯಾಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಶಿಕ್ಷಣ ಸಂಸ್ಕಾರಯುತವಾಗಿರಬೇಕು, ಶ್ರೀರಾಮನಂತಹ ಆದರ್ಶ ವ್ಯಕ್ತಿಯನ್ನು ಪಾಲಿಸಬೇಕು ಎಂದರು.
ಶ್ರೀ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀರಾಮ ವಿದ್ಯಾಕೇಂದ್ರ ಜಗತ್ತಿಗೆ ಮಾದರಿಯಾಗಿರುವ ಶಿಕ್ಷಣ ಸಂಸ್ಥೆಯಾಗಿದೆ. ವಿದ್ಯಾ ಋಣವನ್ನು ತೀರಿಸಲು ಅಸಾಧ್ಯ. ಸಂಸ್ಕಾರ, ಧರ್ಮವನ್ನು ಆಧರಿಸಿದಂತಹ ಶಿಕ್ಷಣವನ್ನು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕ್ರೆಡೈ ಮಂಗಳೂರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಜುನ್ ರಾವ್ ಮಾತನಾಡಿ, ಮೌಲ್ಯಯುತ ಶಿಕ್ಷಣವು ಶಿಕ್ಷಣದ ಪ್ರಮುಖ ಹಂತವಾಗಿದ್ದು, ಅದು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದರು.
ದೇವೇಂದ್ರ ಬಿ.ಬನ್ನನ್, ಕೆ.ಕೃಷ್ಣಾನಂದ ಕಾಮತ್, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ಎನ್., ಸೆಕೆಂಡರಿ ಸ್ಕೂಲ್ನ ಉಪಪ್ರಾಂಶುಪಾಲ ತಿರುಮಲೇಶ್ವರ ಪ್ರಶಾಂತ್ ಉಪಸ್ಥಿತರಿದ್ದರು.
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವಾಸವಿ ಮತ್ತು ತೀರ್ಥ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿನಿ ಮನಾಲಿ ನಿರೂಪಿಸಿ, ವೈಷ್ಣವಿ ಸ್ವಾಗತಿಸಿ, ಗೌತಮಿ ವಂದಿಸಿದರು.