ಮಂಡ್ಯದಲ್ಲಿ ಮೆಗಾ ಡೇರಿ ಉದ್ಘಾಟನೆ: ಪ್ರತಿ ಪಂಚಾಯಿತಿಯಲ್ಲೂ ಡೇರಿ ಸ್ಥಾಪನೆಗೆ ಯೋಜನೆ ಎಂದ ಅಮಿತ್​ ಶಾ

mandya mega deri amit shah 1
Published on

ಮಂಡ್ಯ: ಸಕ್ಕರೆ ನಾಡು ಮಂಡ್ಯಕ್ಕೆ ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಶುಕ್ರವಾರ ಆಗಮಿಸಿದ್ದು, ಮೆಗಾ ಡೇರಿ ಉದ್ಘಾಟಿಸಿದರು. ಸಮಾರಂಭದ ವೇದಿಕೆ ಅಮಿತ್​ ಶಾ ಅವರ ಜತೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಾಲಿಗೆ ನಮಸ್ಕರಿದರು.

ನಮ್ಮೆಲ್ಲರ ಪ್ರೀತಿಯ ನೇತಾರ ಎಚ್​.ಡಿ.ದೇವೇಗೌಡರೇ... ಎಂದು ಭಾಷಣ ಆರಂಭಿಸಿದ ಅಮಿತ್ ಶಾ, ಸ್ವಾತಂತ್ರ್ಯ ಬಂದಾಗಲೇ ಸಹಕಾರ ಇಲಾಖೆಗೆ ರೈತರ ಬೇಡಿಕೆ ಇದೆ. ಅಂದೇ ಬೇಡಿಕೆ ಈಡೇರಿಸಿದ್ದರೆ ಪರಿಸ್ಥಿತಿಯೇ ಬೇರೆ ಇರುತ್ತಿತ್ತು. ಇದನ್ನು ಮಾಡಿದ ಪ್ರಧಾನಿ ಮೋದಿಗೆ ಕೃತಜ್ಞತೆ. ಸಹಕಾರಿ ಕ್ಷೇತ್ರಕ್ಕೆ ಅನ್ಯಾಯವಾಗದಂತೆ ನಮ್ಮ ಸರ್ಕಾರ ನೋಡಿಕೊಳ್ಳುತ್ತದೆ. ಕರ್ನಾಟಕದಲ್ಲಿ ಸಹಕಾರ ಕ್ಷೇತ್ರದಲ್ಲಿ ತುಂಬಾ ಚೆನ್ನಾಗಿ ಕೆಲಸ ಆಗುತ್ತಿದೆ. 210 ಗ್ರಾಮಗಳು ಇದರಲ್ಲಿದ್ದು, 22 ಲಕ್ಷ ರೈತರು ಭಾಗಿಯಾಗಿದ್ದಾರೆ. ಅಮುಲ್ ಹಾಗೂ ನಂದಿನಿ ಒಂದಾಗಿ ಕೆಲಸ ಮಾಡಿದರೆ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಡೇರಿ ಸ್ಥಾಪಿಸಬಹುದು. ಮೂರು ವರ್ಷದಲ್ಲಿ ಪ್ರತಿ ಪಂಚಾಯಿತಿಯಲ್ಲಿ ಡೇರಿ ಸ್ಥಾಪನೆಗೆ ಯೋಜನೆ ರೂಪಿಸಲಾಗುವುದು. ಈ ಮೂಲಕ ದೇಶದ ಎಲ್ಲ ರೈತರನ್ನೂ ಹಾಲಿನ ಕ್ರಾಂತಿ ಮೂಲಕ ಸೇರಿಸುತ್ತೇವೆ. ತಾಂತ್ರಿಕ ಸಹಕಾರ ಸೇರಿ ಎಲ್ಲ ಸಹಕಾರ ನೀಡಲು ನಾವು ಬದ್ಧ ಎಂದರು. ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡುತ್ತಿರುವುದಕ್ಕೆ ಸಿಎಂಗೆ ಅಭಿನಂದನೆ. ಶಾಲೆಗಳಲ್ಲಿ ಮಕ್ಕಳಿಗೆ ಹಾಲು ವಿತರಣೆಗೆ ವ್ಯವಸ್ಥೆ ಮಾಡಿರುವುದಕ್ಕೂ ಅಮಿತ್​ ಶಾ ಅಭಿನಂದನೆ ಸಲ್ಲಿಸಿದರು.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮಂಡ್ಯವನ್ನ ಅರ್ಥ ಮಾಡಿಕೊಂಡ್ರೆ ಇಡೀ ಇಂಡ್ಯಾವನ್ನ ಅರ್ಥ ಮಾಡಿಕೊಂಡ ಹಾಗೆ. ಭಾರತದ ಶಕ್ತಿ ರೈತರು. ಭಾರತದ ಶೇ.65 ಜನ ದೇಶದಲ್ಲಿ ವ್ಯವಸಾಯ ಮಾಡ್ತಿದ್ದಾರೆ. ರೈತರ ಬದುಕು ಹಸನಾಗಲು ಸರ್ಕಾರಗಳು ಶ್ರಮಿಸುತ್ತಿವೆ. ನಮ್ಮ ಜಿಡಿಪಿಗೆ ಶೇ.20 ಕೊಡುಗೆ ಕೃಷಿಯಿಂದಲೇ ಸಿಗ್ತಿದೆ. ಸರ್ಕಾರ ಮತ್ತಷ್ಟು ರೈತರಿಗೆ ಅನುಕೂಲ ಆಗುವ ಯೋಜನೆ ತರಬೇಕು. ಸಹಕಾರ ಇಲಾಖೆ ಕೂಡ ಹೈನುಗಾರಿಕೆಗೆ ಉತ್ತೇಜನ ನೀಡ್ತಿದೆ. ಎಲ್ಲ ಜಿಲ್ಲೆಗಳಿಗಿಂತ ಹೆಚ್ಚಿನ ಹಾಲು ಉತ್ಪಾದನೆ ಆಗ್ತಿರೋದು ಮಂಡ್ಯದಲ್ಲಿ. ಬಹಳ ದಿನಗಳಿಂದ ರೈತರಿಗೆ ಮೈಶುಗರ್ ಆರಂಭದ ಬೇಡಿಕೆ ಇತ್ತು. ಸರ್ಕಾರ ಮೈಶುಗರ್ ಆರಂಭಿಸಿದೆ. ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಡ ಇದೆ. ಕಳೆದ ವಾರವಷ್ಟೇ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಶೀಘ್ರದಲ್ಲೇ ರೈತರ ಎಲ್ಲ ಸಮಸ್ಯೆಗಳನ್ನ ಪರಿಹರಿಸುವ ಕೆಲಸ ಆಗುತ್ತೆ. ಸಹಕಾರ ಇಲಾಖೆಯಲ್ಲಿನ ಸಮಸ್ಯೆಗಳ ಬಗೆಹರಿಸಬೇಕು. ಈ ಬಗ್ಗೆ ಮಾಜಿ ಪ್ರಧಾನಿಗಳು ಮಾತನಾಡಿದ್ರು. ಈ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಸಹಕಾರಿ ಇಲಾಖೆಯ ನ್ಯೂನ್ಯತೆಗಳನ್ನ ಸರಿಮಾಡಬೇಕು ಎಂದರು.

ಮೇಗಾ ಡೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿ.ಎಸ್​.ಯಡಿಯೂರಪ್ಪ, ಡಾ.ಸಿ.ಎನ್​.ಅಶ್ವಥನಾರಾಯಣ, ಪ್ರಹ್ಲಾದ್ ಜೋಶಿ, ಎಸ್‌.ಟಿ. ಸೋಮಶೇಖರ್, ನಾರಾಯಣ ಗೌಡ, ಗೋಪಾಲಯ್ಯ, ಸಿ.ಟಿ.ರವಿ, ವಿಜಯೇಂದ್ರ, ಸಿ.ಪಿ.ಯೋಗೇಶ್ವರ್, ಶಾಸಕರಾದ ರಾಮದಾಸ್, ಎನ್.ಮಹೇಶ್, ನಿರಂಜನ್ ಕುಮಾರ್ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು. ಸಮಾರಂಭದ ಬಳಿಕ ಅಮಿತ್​ ಶಾ ಅವರು ಡೇರಿ ಆವರಣದಲ್ಲೇ ವಿಶೇಷ ಭೋಜನ ಸವಿದರು. ರಾಗಿ ರೊಟ್ಟಿ, ಉಚ್ಚಳು ಚಟ್ನಿ, ಮುದ್ದೆ, ಎಳನೀರು ಪಾಯಸ, ಪುಲ್ಕ, ಅನಾನಸ್ ಸಲಾಡ್, ಪನ್ನೀರ್ ಟಿಕ್ಕಾ, ನಂದಿನಿ ಐಸ್ ಕ್ರೀಂ, ನಂದಿನಿ ಮೈಸೂರು ಪೇಡಾ ಸೇರಿ ಹಲವು ಖಾದ್ಯಗಳನ್ನು ಬಡಿಸಲಾಯಿತು.

ಇನ್ನು ಮೆಗಾ ಡೈರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಸುಮಲತಾ ಅಂಬರೀಶ್ ಗೈರಾಗಿದ್ದರು. ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಇಂದಿನ ಬಿಜೆಪಿ ಕಾರ್ಯಕ್ರಮದ ಸ್ವಾಗತ ಫ್ಲೆಕ್ಸ್​ನಲ್ಲಿ ಸಂಸದರ ಫೋಟೋ ಕೂಡ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net