

ಶಿರ್ವ: ಸಂಘಟನೆಗಳಿಗೆ ಕಾರ್ಯಾಲಯಗಳು ಇದ್ದಾಗ ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯ. ಸಂಘ ಸಂಸ್ಥೆಯಲ್ಲಿ ಸರ್ವರೂ ಸಮಾನರು ಎನ್ನುವ ಮನೋಭಾವ ಬೆಳೆದಾಗ ಸಮಾಜದಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯ. ಕನ್ನಡ, ನಾಡು, ನುಡಿ ಜಾನಪದ ಸಾಹಿತ್ಯ ಚಟುವಟಿಕೆಗಳಿಗೆ ಪ್ರೇರಣಾ ಕೇಂದ್ರವಾಗಿ ಬೆಳಗಲಿ ಎಂದು ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಹೇಳಿದರು. ಬಂಟಕಲ್ಲು ಬಸ್ ನಿಲ್ದಾಣದ ಸಮೀಪ ಮಾಧವ ಕಾಮತ್ ಸಂಕೀರ್ಣದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಕಾಪು ಕಸಾಪ ಘಟಕಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಜಿಲ್ಲಾ ಕೋಶಾಧ್ಯಕ್ಷ ಮನೋಹರ ಪಿ., ಸಂಘಟನಾ ಕಾರ್ಯದರ್ಶಿ ದೀಪಕ್ ಕೆ.ಬೀರ, ಕೆ.ಆರ್.ಪಾಟ್ಕರ್, ಸದಸ್ಯರಾದ ಮಧುಕರ್ ಎಸ್.ಕಲ್ಯಾ, ಕೃಷ್ಣಕುಮಾರ್ ರಾವ್ ಮಟ್ಟು, ದೇವದಾಸ್ ಪಾಟ್ಕರ್ ಮುದರಂಗಡಿ, ಹಾಜಿ ಅಬ್ಬಾಸ್ ಸಾಹೇಬ್ ಕಣ್ಣಂಗಾರ್ ಹೆಜಮಾಡಿ ಉಪಸ್ಥಿತರಿದ್ದರು. ಶ್ರೀನಿಧಿ ದೇವಾಡಿಗ ನಾಡಗೀತೆ ಹಾಡಿ, ಸದಸ್ಯ ಎಸ್.ಎಸ್.ಪ್ರಸಾದ್ ನಿರೂಪಿಸಿದರು. ಕಾರ್ಯದರ್ಶಿ ನೀಲಾನಂದ್ ನಾಯ್ಕ ವಂದಿಸಿದರು.
ರಾಜ್ಯದಲ್ಲಿ ನೂತನ ತಾಲೂಕು ಆಗಿ ಪ್ರಾರಂಭಗೊಂಡ ಕಾಪುವಿನಲ್ಲಿ ಸಾಹಿತ್ಯ ಪರಿಷತ್ತು ಘಟಕ ಪ್ರಾರಂಭಗೊಂಡು ಪ್ರತಿ ವರ್ಷ ನಿರಂತರ ಐದು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ ಕೀರ್ತಿ ಈ ತಾಲೂಕಿಗೆ ಸಂದಿದೆ. ಉಡುಪಿ ಜಿಲ್ಲೆಯಲ್ಲಿ ನೂತನ ಕಾರ್ಯಾಲಯ ಪ್ರಾರಂಭಿಸಿದ ಕೀರ್ತಿಯೂ ಕಾಪು ಘಟಕಕ್ಕೆ ಸಂದಿದೆ.-ನೀಲಾವರ ಸುರೇಂದ್ರ ಅಡಿಗ, ಅಧ್ಯಕ್ಷ, ಉಡುಪಿ ಜಿಲ್ಲಾ ಕಸಾಪ