

ಮೂಲ್ಕಿ: ರಾಜ್ಯ ಸರ್ಕಾರದ ಸೂಚನೆಯಂತೆ ತಾಲೂಕು ವ್ಯಾಪ್ತಿಯ ಕಂದಾಯ ಇಲಾಖೆಯ ಕಡತಗಳನ್ನು ಗಣಕೀಕರಣ ಮಾಡುವ ಮೂಲಕ ಹಳೆಯ ದಾಖಲೆಗಳನ್ನು ಸಾವಾನ್ಯ ಜನರಿಗೆ ಸುಲಭವಾಗಿ ಲಭ್ಯವಾಗುವ ದೃಷ್ಟಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಶ್ರೀ ಚಾಲ್ತಿಗೆ ಬರಲಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಮೂಲ್ಕಿ ತಾಲೂಕು ಭೂ ಸುರಕ್ಷಾ ಯೋಜನೆಯಡಿ ಕಂದಾಯ ಇಲಾಖೆಯ ಹಳೆಯ ದಾಖಲೆಗಳನ್ನು ಗಣಕೀಕರಣಗೊಳಿಸುವ ಸಂಬಂಧ ಅಭಿಲೇಖಾಲಯಗಳ ಗಣಕೀಕರಣದ ಉದ್ಘಾಟನೆಯನ್ನು ತಾಲೂಕಿನ ಬಪ್ಪನಾಡು ಹಳೇ ನಾಡಕಚೇರಿ ಕಟ್ಟಡದಲ್ಲಿ ಉದ್ಘಾಟಿಸಿ ಮಾತನಾಡಿದರು.
ಬಹುಕೋಟಿ ವೆಚ್ಚದ ಮೂಲ್ಕಿ ತಾಲೂಕು ಆಡಳಿತ ಆಡಳಿತ ಸೌಧದ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಶೀಘ್ರ ಲೋಕಾರ್ಪಣೆ ನಡೆಯಲಿದೆ ಎಂದರು.
ಮೂಲ್ಕಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಮುಖ್ಯಾಧಿಕಾರಿ ಮಧುಕರ್, ಸದಸ್ಯರಾದ ಸುಭಾಶ್ ಶೆಟ್ಟಿ, ಭೀಮಾಶಂಕರ್, ಶೈಲೇಶ್ ಕುವಾರ್, ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಪ್ರಭಾರ ಕಂದಾಯ ಅಧಿಕಾರಿ ಮೋಹನ್, ವಿ.ಎ. ಸುಜಿತ್, ಸ್ಥಳೀಯರಾದ ಹರಿಶ್ಚಂದ್ರ ಕೆ.ಎಸ್.ರಾವ್ ನಗರ ಮತ್ತಿತರರಿದ್ದರು.