

ಕುಂದಾಪುರ: ಮಹಿಳೆ ಮತ್ತು ಪುರುಷರು ಸಮಾಜದ ಕಣ್ಣುಗಳು. ಸಾಮಾಜಿಕ ಅಭಿವೃದ್ಧಿಯಲ್ಲಿ ಇಬ್ಬರ ತೊಡಗುವಿಕೆ ಬಹುಮುಖ್ಯ. ಹಲವು ಕಾರಣಗಳಿಂದ ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಮಹಿಳಾ ಸಬಲೀಕರಣದ ಬಗ್ಗೆ ಚಿಂತಿಸಬೇಕಾಗಿದೆ ಎಂದು ಜೆಸಿಐ ಭಾರತ ರಾಷ್ಟ್ರೀಯ ಪೂರ್ವ ಕಾನೂನು ಸಲಹೆಗಾರರಾದ ಸೌಜನ್ಯಾ ಹೆಗ್ಡೆ ಹೇಳಿದರು.
ಕುಂದಾಪುರ ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಜೆಸಿಐ ಕುಂದಾಪುರ ಸಿಟಿ ಲೇಡಿ ಜೇಸಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾನಸಿಕ ಒತ್ತಡ ನಿವಾರಣಾ ಕಾರ್ಯಕ್ರಮ ಹಾಗೂ ಸ್ವರಕ್ಷಣಾ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸುಫ್ ಸಲೀಂ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಮೋದ್ ಹಂದೆ ಕಾನೂನಿನ ಅರಿವು ಬಗ್ಗೆ ಮಾಹಿತಿ ನೀಡಿದರು. ಜೆಸಿಐ ಕುಂದಾಪುರ ಸಿಟಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಲೇಡಿ ಜೇಸಿ ನಿರ್ದೇಶಕಿ ಶೈಲಾ ಲೂಯಿಸ್, ಸಂಯೋಜಕಿ ಪ್ರೇಮಾ ಡಿಕುನ್ಹ, ಜೆಸಿಐ ಕುಂದಾಪುರ ಸಿಟಿ ಕಾರ್ಯದರ್ಶಿ ಕಿರಣ್ ದೇವಾಡಿಗ, ಪ್ರಾಂಶುಪಾಲೆ ಸಬೀನಾ, ಕಾರ್ಯಕ್ರಮ ಸಂಚಾಲಕ ನೂತನ್ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಸುಮನಾ ಕಾರ್ಯಕ್ರಮ ನಿರೂಪಿಸಿದರು. ನಿದಾ ಕೋಟೇಶ್ವರ ವಂದಿಸಿದರು.