ರಾಗಿಗುಡ್ಡದಲ್ಲಿ ದುಷ್ಕೃತ ಮಾಡಿದವರಿಗೆ ಬುದ್ದಿ ಕಲಿಸಿ: ಬಿ.ವೈ.ರಾಘವೇಂದ್ರ

mp b,y.raghavendra
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ
Published on

ಶಿವಮೊಗ್ಗ: ರಾಗಿಗುಡ್ಡದಲ್ಲಿ ನಡೆದಂತಹ ದುಷ್ಕೃತಗಳನ್ನು ಮಾಡುವವರು ಯಾರೇ ಆಗಲೀ ಅಥವಾ ಯಾವ ಧರ್ಮದವರೇ ಆದರೂ ಅವರಿಗೆ ಬುದ್ದಿ ಕಲಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಕಲ್ಲು ತೂರಾಟದಿಂದ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ ಅನೇಕ ಹಿಂದುಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ರೀತಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರು ಕೂಡ ನಡೆಸಬಾರದು ಎಂದರು.
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನಡೆದಿದೆ. ಆದರೆ ಈದ್ ಮಿಲಾದ್ ಮೆರವಣಿಗೆ ವೇಳೆ ಈ ರೀತಿ ನಡೆದಿರುವುದು ದುರಂತ. ಈ ಕೃತ್ಯ ಯಾರು ಮಾಡಿದರು, ಯಾಕೆ ಮಾಡಿದರೂ ಅವರ ಮೇಲೆ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಶಿವಮೊಗ್ಗ ಶಾಂತಿಯುತವಾಗಿರಬೇಕು ಎಂದರು.
ರಾಗಿಗುಡ್ಡದಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಶಾಶ್ವತ ಪರಿಹಾರ ಕಂಡು ಹಿಡಿಯಬೇಕಿದೆ. ಪೊಲೀಸರ ವಾಹನ ನಿಲ್ಲಿಸಿಕೊಂಡು ಹಬ್ಬ ಆಚರಣೆ ಮಾಡುವಂತಾಗಬಾರದು. ತಪ್ಪು ಮಾಹಿತಿ ಹಾಗೂ ವದಂತಿಗಳಿಗೆ ಯಾರು ಕಿವಿಗೊಡಬಾರದು. ಹೊರಗಿನಿಂದ ಬಂದವರು ಯಾರು ಯಾಕೆ ಎಂಬುದು ತಿಳಿಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net