ಗುಜರಾತ್​ನಲ್ಲಿ ಲಾಕ್​ಡೌನ್​ ಉಲ್ಲಂಘಿಸಿದ್ದಕ್ಕೆ ಒಂದೇ ದಿನದಲ್ಲಿ ಗರಿಷ್ಠ ವಾಹನಗಳ ಜಪ್ತಿ, 5 ಸಾವಿರಕ್ಕೂ ಹೆಚ್ಚು ಜನರ ಬಂಧನ

gujarat
Published on

ಅಹಮದಾಬಾದ್​: ಅತಿಹೆಚ್ಚು ಕರೊನಾ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಗುಜರಾತ್​ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಅಲ್ಲದೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ದೇಶಾದ್ಯಂತ ಜಾರಿಯಲ್ಲಿರುವಂತೆ ಮೇ 3ರವರೆಗೆ ಈ ರಾಜ್ಯದಲ್ಲೂ ಲಾಕ್​ಡೌನ್​ ಜಾರಿಗೊಳಿಸಲಾಗಿದ್ದರೂ, ಜನರು ಮಾತ್ರ ಬಿಡುಬೀಸಾಗಿ ಓಡಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಾರಂಭಿಸಿದ್ದಾರೆ.

ಭಾನುವಾರದಂದು ಲಾಕ್​ಡೌನ್​ ನಿಯಮ ಉಲ್ಲಂಘಿಸಿ, ಅನಗತ್ಯವಾಗಿ ಸಂಚರಿಸುತ್ತಿದ್ದ 10,488 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ, ಲಾಕ್​ಡೌನ್​ ನಿಯಮ ಮೀರಿದ ಆರೋಪದಲ್ಲಿ 2,715 ಜನರ ವಿರುದ್ಧ ಎಫ್​ಐಆರ್​ ಹಾಕಿದ್ದಾರೆ.ಕ್ವಾರಂಟೈನ್​ ನಿಯಮ ಉಲ್ಲಂಘಿಸಿದ್ದಕ್ಕಾಗಿ 962 ಮಂದಿ ವಿರುದ್ಧ ಹಾಗೂ ಲಾಕ್​ಡೌನ್​ನ ಇತರ ನಿಯಮಗಳ ಉಲ್ಲಂಘನೆಗೆ 506 ಜನರ ವಿರುದ್ಧ ಎಫ್​ಐಆರ್​ಗಳನ್ನು ದಾಖಲಿಸಲಾಗಿದೆ.

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇದುವರೆಗೆ 5,390 ಜನರನ್ನು ಬಂಧಿಸಿರುವುದಾಗಿ ಗುಜರಾತ್​ ಪೊಲೀಸ್​ ಡಿಜಿಪಿ ಶಿವಾನಂದ ಝಾ ಮಾಹಿತಿ ನೀಡಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net