

ವಿಜಯಪುರ: ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ (ಜಿಒಸಿಸಿ) ಚುನಾವಣೆಯಲ್ಲಿ ಭಾರಿ ಗೋಲ್‌ಮಾಲ್ ನಡೆದಿದ್ದು, ಸತ್ತವರ ಹೆಸರಿನಲ್ಲಿಯೂ ಮತ ಚಲಾವಣೆಯಾಗಿದೆ. ಮಾತ್ರವಲ್ಲ, ಒಂದು ಕಡೆ ಅನರ್ಹರಿಂದ ಮತ ಚಲಾವಣೆಯಾದರೆ ಇನ್ನೊಂದೆಡೆ ಅನಧಿಕೃತವಾಗಿ-ಅಕ್ರಮವಾಗಿ ಮತ ಚಲಾಯಿಸಿರುವುದು ಕಂಡು ಬಂದಿದೆ. ಹೀಗಾಗಿ ಕೂಡಲೇ ಘೋಷಿತ ಫಲಿತಾಂಶವನ್ನು ಅಸಿಂಧುಗೊಳಿಸಿ ಮರು ಚುನಾವಣೆ ನಡೆಸಬೇಕೆಂದು ಸುರೇಶ ಶಡಶ್ಯಾಳ ನೇತೃತ್ವದ ಗುರು ಬ್ರಿಗೇಡ್ ತಂಡದ ಪರಾಜಿತ ಅಭ್ಯರ್ಥಿಗಳು ಆಗ್ರಹಿಸಿದರು.
ಜ. 5 ರಂದು ನಡೆದ ಜಿಒಸಿಸಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಮೃತರ ಹೆಸರನ್ನು ಅರ್ಹ ಮತದಾರರ ಪಟ್ಟಿಯಿಂದ ತೆಗೆಯಬೇಕಿದ್ದರೂ ಕಳೆದ 4-5 ವರ್ಷಗಳ ಹಿಂದೆ ಮೃತರಾದ ಬ್ಯಾಂಕ್‌ನ ಸದಸ್ಯರ ಹೆಸರುಗಳನ್ನು ತೆಗೆದುಹಾಕಿಲ್ಲ. ಬದಲಾಗಿ ಮೃತರ ಹೆಸರಿನಲ್ಲಿ ಮತಚಲಾಯಿಸಲಾಗಿದೆ. ಈ ಬಗ್ಗೆ ಚುನಾವಣೆ ಅಧಿಕಾರಿಗಳ ಗಮನಕ್ಕೆ ತಂದರೆ ನ್ಯಾಯಾಲಯದ ಮೊರೆ ಹೋಗುವಂತೆ ಹೇಳಿದ್ದಾರೆ. ಆದ್ದರಿಂದ ಇದೊಂದು ಅಕ್ರಮ ಚುನಾವಣೆ ಎಂದು ಅಭ್ಯರ್ಥಿಗಳು ಶುಕ್ರವಾಗಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ದಾಖಲೆ ಪ್ರದರ್ಶಿಸಿದರು.
ಬೈಲಾ ಪ್ರಕಾರ ನಿವೃತ್ತರ ಸದಸ್ಯತ್ವ ರದ್ದಾಗಬೇಕು. ಆದರೆ, ನಿವೃತ್ತರನ್ನು ಕೂಡ ಮತದಾರರ ಯಾದಿಯಲ್ಲಿರಿಸಲಾಗಿದ್ದು ಅವರು ಕೂಡ ಮತ ಚಲಾಯಿಸಿದ್ದಾರೆ. ಚುನಾವಣಾ ದಿನಾಂಕ ಘೋಷಣೆಗೆ ಮುಂಚಿತವಾಗಿ 12 ತಿಂಗಳ ಮೊದಲು ಬ್ಯಾಂಕ್‌ನ ಸದಸ್ಯರಾದವರು ಅರ್ಹ ಮತದಾರನಾಗಿರುತ್ತಾರೆ. ಆದರೆ 12 ತಿಂಗಳ ಒಳಗೆ ಸದಸ್ಯತ್ವ ಪಡೆದವರನ್ನು ಅರ್ಹ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಒಬ್ಬರ ಮತ ಬೇರೊಬ್ಬರು ಖೊಟ್ಟಿಯಾಗಿ ಚಲಾವಣೆ ಮಾಡಿದ್ದು ಕಂಡು ಬಂದಿದೆ. ಕರಡು ಮತದಾರರ ಪಟ್ಟಿಯ ಭಾಗ 1 ರಿಂದ 7 ರಲ್ಲಿ ಮತದಾರರ ಇಲಾಖೆಗಳು ಅದಲು ಬದಲಾವಣೆಯಾಗಿದ್ದು ಅದನ್ನು ಸರಿಪಡಿಸುವಂತೆ ರಿಟರ್ನಿಂಗ್ ಆಫೀಸರ್‌ಗೆ ಡಿ. 23 ಹಾಗೂ 24ರಂದು ಲಿಖಿತವಾಗಿ ದೂರು ನೀಡಿದರೂ ಕ್ರಮವಾಗಿಲ್ಲ ಎಂದು ಸುರೇಶ ಶಡಶ್ಯಾಳ ಆಪಾದಿಸಿದರು.
ಅನರ್ಹರು ಮತ್ತು ಅನಧಿಕೃತವಾಗಿ ಮತ ಚಲಾಯಿಸಿದ್ದರಿಂದ ಅರ್ಹತೆ ಹೊಂದಿದ 300 ಕ್ಕಿಂತಲೂ ಹೆಚ್ಚು ಮತದಾರರು ಹಕ್ಕು ಚಲಾಯಿಸದೇ ಮರಳಿದ್ದಾರೆ. ಅವರಿಗೆ ಚಾಲೆಂಜಿಂಗ್ ಮತಕ್ಕೆ ಅವಕಾಶ ಕಲ್ಪಿಸಿಲ್ಲ. ಚುನಾವಣಾಧಿಕಾರಿಗಳನ್ನು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಂಡು ಮತದಾನ ಕೇಂದ್ರದಿಂದ ಹೊರ ಹಾಕಿದ್ದಾರೆ. ಪ್ರಶ್ನೆ ಮಾಡಿದವರ ಪೈಕಿ ಕೆಲವೇ ಕೆಲವರಿಗೆ ಚಾಲೇಂಜಿಂಗ್ ಮತ ಚಲಾಯಿಸಲು ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆಂದು ಆಪಾದಿಸಿದರು.
ಮತದಾನದ ಗೌಪ್ಯತೆ ಕಾಪಾಡಿಕೊಳ್ಳಬೇಕಿರುವುದು ಚುನಾವಣೆ ನಿಯಮ. ಆದರೆ, ಮತದಾನ ಮಾಡಿದ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ವಿಡಿಯೋ ಬಳಸಿಕೊಂಡು ಮತದಾನದ ದಿನ ಮತದಾರರ ಮೇಲೆ ಪ್ರಭಾವ ಬೀರಲಾಗಿದೆ. ಮತ ಚಲಾಯಿಸಿದ ವಿಡಿಯೋ ತೋರಿಸಿ ಭಾರಿ ಮೊತ್ತದ ಹಣ ಹಾಗೂ ಉಡುಗೊರೆ ಪಡೆದಿರುವುದು ಕಂಡು ಬಂದಿದೆ. ಈ ಬಗ್ಗೆ ಚುನಾವಣೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ, ಹೇಳಲು ಮತ್ತು ಕೇಳಲು ಹೋದವರನ್ನು ಮತದಾನ ಕೇಂದ್ರದಿಂದ ಹೊರಹಾಕಿದ್ದಾರೆಂದು ಆರೋಪಿಸಿದರು.
ಕೆಜಿಐಡಿ ನಂಬರ್ ಹೊಂದಿದ ರಾಜ್ಯ ಸರ್ಕಾರಿ ನೌಕರರು ಮಾತ್ರ ಬ್ಯಾಂಕ್‌ನ ಸದಸ್ಯರಾಗಲು ಅರ್ಹರಾಗಿರುವರು ಎಂದು ಬೈಲಾದಲ್ಲಿ ಸ್ಪಷ್ಟಪಡಿಸಿದರು ಕೂಡಾ ಬ್ಯಾಂಕ್‌ನಲ್ಲಿ ಕೆಜಿಐಡಿ ನಂಬರಿಲ್ಲದ ನೌಕರರು ಸದಸ್ಯರಾಗಿದ್ದು, ಅವರು ಮತ ಚಲಾಯಿಸಿದ್ದಾರೆ. ಸುಮಾರು 9 ಅಭ್ಯರ್ಥಿಗಳ ಭಾವ ಚಿತ್ರ ಇರುವ ಟಿಫಿನ್ ಬಾಕ್ಸ್ ಮತದಾನದ ಮುಂಚಿನ ದಿನ ಹಂಚಿಕೆ ಮಾಡಲಾಗಿದೆ. ಮತ ಎಣಿಕೆ ಆದ ತಕ್ಷಣವೇ ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆ ನಮೂದಿಸಿ ದೃಢೀಕರಿಸುವುದು ನಿಯಮ. ಆದರೆ ರಿಟರ್ನಿಂಗ್ ಅಧಿಕಾರಿ ಗುರುನಾಥ ದಡ್ಡಿ 5 ದಿನಗಳ ನಂತರ ಲಿಖಿತವಾಗಿ ಮಾಹಿತಿ ಕೇಳಿದರೂ ಈವರೆಗೆ ಲಭ್ಯವಿರುವುದಿಲ್ಲ ಅಂತ ಮೌಖಿಕವಾಗಿ ತಿಳಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಈ ಎಲ್ಲ ಕಾರಣಗಳಿಂದಾಗಿ ತಮ್ಮ ಬಣಕ್ಕೆ ಹಿನ್ನಡೆಯಾಗಿದೆ ಎಂದರು.
ಅಭ್ಯರ್ಥಿಗಳಾದ ಜಯಶ್ರೀ ಬೆಣ್ಣಿ, ಜಗದೀಶ ಬೋಳೆಸೂರ, ನೀಲಾ ಇಂಗಳೆ, ಉಮೇಶ ಗುಡ್ನಾಳ, ನೀಜು ಮೇಲಿನಕೇರಿ, ರವೀಂದ್ರ ಉಗಾರ, ಗಂಗಾಧರ ಗುಗ್ಗರಿ ಮತ್ತಿತರರಿದ್ದರು.