

ರೋಮ್: ಕರೊನಾ ವೈರಸ್ Covid19 ಸೋಂಕು ಇಟಲಿಯನ್ನರನ್ನು ತೀವ್ರವಾಗಿ ಬಾಧಿಸಿದೆ. ಪರಿಣಾಮ, ಎಂದೂ ನಿರಂತರ ಕೆಲಸ ಮಾಡದೇ ಇದ್ದ ಚಿತಾಗಾರಗಳಲ್ಲಿ ದಿನದ 24 ಗಂಟೆ ಕಾಲ ಶವ ಸಂಸ್ಕಾರದ ಕೆಲಸಗಳು ನಡೆದಿವೆ. ನಗರದ ಎರಡು ಪ್ರಮುಖ ಆಸ್ಪತ್ರೆಗಳ ಶವಾಗಾರದಲ್ಲಿ ಶವಪೆಟ್ಟಿಗೆಗಳು ತುಂಬಿವೆ. ಚರ್ಚ್ಗಳ ಸಿಮೆಟ್ರಿಯಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಸರದಿ ನಿಲ್ಲುವಂತಾಗಿದೆ. ಸ್ಥಳೀಯ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ನಿಧನವಾರ್ತೆಗಳ ಪ್ರಮಾಣ ಎರಡು ಮೂರು ಪುಟ ಇದ್ದಿದ್ದು 10 ಪುಟಗಳಿಗೆ ಏರಿಕೆಯಾಗಿದೆ.
ಬರ್ಗಾಮೋದ ಪ್ರಾಂತ್ಯದ ಉತ್ತರ ಭಾಗದಲ್ಲಿ ಕರೋನಾ ವೈರಸ್ ಸೋಂಕಿನಿಂದಾಗಿ ಮರಣ ತಾಂಡವವಾಡುತ್ತಿದೆ. ಜನರನ್ನು ಆ್ಯಂಬುಲೆನ್ಸ್ಗಳಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸುವ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ. ಐಸೋಲೇಷನ್ ವಾರ್ಡ್ಗಳ ಬಳಿ ಯಾರನ್ನೂ ಸುಳಿಯಲು ಬಿಡುತ್ತಿಲ್ಲ. ಹೀಗಾಗಿ ಸಂಬಂಧಿಕರು, ಗೊಂದಲ ಆತಂಕದ ನಡುವೆ ಹೊಯ್ದಾಡುತ್ತಿರುವ ದೃಶ್ಯವೂ ಸಾಮಾನ್ಯವಾಗಿದೆ. ಇನ್ನು ಮೃತಪಟ್ಟವರ ಅಂತ್ಯ ಸಂಸ್ಕಾರ ಸ್ಥಳದಲ್ಲಿ ಸಂಬಂಧ ಪಟ್ಟ ಪ್ರೀಸ್ಟ್ ಮತ್ತು ಸಿಮೆಟ್ರಿಯ ಕೆಲಸಗಾರ ಮಾತ್ರವೇ ಇರಬೇಕೆಂಬ ಆದೇಶವೂ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಾರ್ತಾ ಟೆಸ್ಟಾ ಎಂಬ 43 ವರ್ಷದ ಮಹಿಳೆ ಸ್ವಯಂ ಐಸೋಲೇಷನ್ಗೆ ಒಳಗಾಗಿದ್ದು, ಅವರ ತಂದೆ(85) ಬುಧವಾರ ನಿಧನರಾಗಿದ್ದಾರೆ. ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಗುಡ್ಬೈ ಹೇಳುವುದಕ್ಕೆ ಕಾಯುತ್ತಿದ್ದೇವೆ ಆದರೆ, ಅವಕಾಶ ಇಲ್ಲ. ಇದೊಂಥರಾ ಯುದ್ಧಕ್ಕಿಂತಲೂ ಭೀಕರವಾದ ಸನ್ನಿವೇಶ ಎಂದು ಹೇಳಿಕೊಂಡಿದ್ದಾರೆ. ಇತರೆ ರಾಷ್ಟ್ರಗಳಲ್ಲಿ ಈ ಸೋಂಕು ಈಗಷ್ಟೇ ಆರಂಭವಾಗಿದ್ದು ಭೀಕರತೆ ಅರಿವಾಗುವುದು ತಡವಾದೀತು. ಮುನ್ನೆಚ್ಚರಿಕೆ ವಹಿಸಿದಷ್ಟೂ ಒಳಿತು ಎಂಬ ಮಾತುಗಳನ್ನೂ ಆಕೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)