

ನವದೆಹಲಿ: ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಉಗ್ರಪೀಡಿತ ಶ್ರೀನಗರ ಸೆಕ್ಟರ್ನ ಸೆಂಟ್ರಲ್ ರಿಸರ್ವ್ ಪೊಲೀಸ್ (ಸಿಆರ್ಪಿಎಫ್) ಫೋರ್ಸ್ ನ ಇನ್ಸ್ಪೆಕ್ಟರ್ ಜನರಲ್ ಆಗಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ನೇಮಕವಾಗಿದ್ದಾರೆ.
ಅವರ ಹೆಸರು ಚಾರು ಸಿನ್ಹಾ. ತೆಲಂಗಾಣ ಕೆಡರ್ನ 1996ರ ಬ್ಯಾಚ್ನ ಅಧಿಕಾರಿಯಾಗಿರುವ ಅವರು ಇನ್ನು ಸಿಆರ್ಪಿಎಫ್ ಶ್ರೀನಗರ ಸೆಕ್ಟರ್ನ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಲಿದ್ದಾರೆ. ಇಂತಹ ಟಫ್ ಟಾಸ್ಕ್ ಅವರ ಹೆಗಲೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರು ಐಜಿ ಆಗಿ ಬಿಹಾರ ಸೆಕ್ಟರ್ನ ಸಿಆರ್ಪಿಎಫ್ನ ಹೊಣೆಗಾರಿಕೆ ವಹಿಸಿ ನಕ್ಸಲ್ ಸಮಸ್ಯೆಯನ್ನು ಎದುರಿಸಿದ್ದರು. ಚಾರು ಅವರ ನಾಯಕತ್ವದಲ್ಲಿ ವಿವಿಧ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ನಡೆದಿವೆ.
ಬಳಿಕ ಅವರನ್ನು ಜಮ್ಮು ಸೆಕ್ಟರ್ನ ಸಿಆರ್ಪಿಎಫ್ ಐಜಿ ಆಗಿ ವರ್ಗಾವಣೆ ಮಾಡಲಾಗಿತ್ತು. ಅಲ್ಲಿ ಸುದೀರ್ಘ ಮತ್ತಯ ಯಶಸ್ವಿ ಅವಧಿಯನ್ನು ಪೂರೈಸಿದ ಅವರು ಸೋಮವಾರದಿಂದ ಶ್ರೀನಗರ ಸೆಕ್ಟರ್ನ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಈ ಸೆಕ್ಟರ್ 2005ರಲ್ಲಿ ಆರಂಭವಾಗಿದ್ದು, ಐಜಿ ಸ್ತರದಲ್ಲಿ ಮಹಿಳಾ ಆಫೀಸರ್ ಇರಲಿಲ್ಲ. ಈ ಸೆಕ್ಟರ್ನಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ಸೇನೆ ಮತ್ತು ಪೊಲೀಸರೊಂದಿಗೆ ಸೇರಿ ಮಾಡಬೇಕಾಗುತ್ತದೆ. (ಏಜೆನ್ಸೀಸ್)