ರಥಬೀದಿಯಲ್ಲಿ ಅಕ್ರಮ ನಿಲುಗಡೆಗಿಲ್ಲ ಕ್ರಮ

parking
ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ರಥಬೀದಿಯಲ್ಲಿ ಅನಧಿಕೃತವಾಗಿ ನಿಲ್ಲಿಸಿರುವ ವಾಹನಗಳು
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ರಥಬೀದಿಯಲ್ಲಿ ರಥೋತ್ಸವದ ಜಾತ್ರೆಗೆಂದು ಕಾಯ್ದಿರಿಸಲಾಗಿದ್ದ ಸ್ಥಳವೀಗ ವಾಹನ ನಿಲುಗಡೆಯ ತಾಣವಾಗಿ ಮಾರ್ಪಡುತ್ತಿದ್ದು, ಪಂಚಾಯಿತಿ ಆದೇಶ ಧಿಕ್ಕರಿಸಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುತ್ತಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ರಥಬೀದಿ ಪರಿಸರದಲ್ಲಿ ವಾಹನ ನಿಲುಗಡೆ ನಿಷೇಧಿಸಿ ಗ್ರಾಮ ಪಂಚಾಯಿತಿ ನಾಮಫಲಕ ಅಳವಡಿಸಿದೆ. ಆದರೆ ಗ್ರಾಮ ಪಂಚಾಯಿತಿ ಆದೇಶ ಧಿಕ್ಕರಿಸಿ, ಪೊಲೀಸರ ಎಚ್ಚರಿಕೆಯನ್ನೂ ಕಡೆಗಣಿಸಿ ಕೆಲವು ತಿಂಗಳಿಂದ ರಥಬೀದಿ ಸಮೀಪ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿದೆ. ರಾತ್ರಿ ಬಸ್, ಲಾರಿಗಳು ಹಾಗೂ ಗೂಡ್ಸ್ ವಾಹನಗಳನ್ನು ನಿಲ್ಲಿಸಿ, ರಥಬೀದಿ ಪರಿಸರದಲ್ಲಿ ತ್ಯಾಜ್ಯಗಳನ್ನು ಎಸೆದು ಮಲೀನಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಅಲ್ಲದೇ, ಕಾಯ್ದಿರಿಸಿದ ಸ್ಥಳದಲ್ಲಿ ಅನಧಿಕೃತ ರಿಕ್ಷಾ ನಿಲ್ದಾಣ ನಿರ್ಮಿಸುವ ಮತ್ತು ವಾಹನ ಪಾರ್ಕಿಂಗ್ ಮಾಡಲು ಯತ್ನಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಥಬೀದಿಯಲ್ಲಿ ಬಸ್ ನಿಲುಗಡೆ ಮಾಡದಂತೆ ಗ್ರಾಮ ಪಂಚಾಯಿತಿ ಈಗಾಗಲೇ ಅನೇಕ ಬಾರಿ ಮೌಖಿಕ ಆದೇಶ ನೀಡಿದ್ದರೂ ಅದನ್ನು ಉಲ್ಲಂಘಿಸಿ ಯಥಾಸ್ಥಿತಿ ಮುಂದುವರಿಸಲಾಗುತ್ತಿದೆ. ಇದರಿಂದ ಜಾತ್ರೋತ್ಸವಕ್ಕೆ ಸ್ಥಳದ ಕೊರತೆ ಎದುರಾಗುವುದು ನಿಶ್ಚಿತ.
ರಥಬೀದಿಯಲ್ಲಿ ಬಸ್, ಲಾರಿ ಸಹಿತ ಯಾವುದೇ ವಾಹನ ನಿಲುಗಡೆಗೆ ಅವಕಾಶ ನೀಡದೆ ಕಠಿಣ ನಿಯಮ ಜಾರಿಗೊಳಿಸಬೇಕು. ಉಲ್ಲಂಘಿಸಿ ವಾಹನ ನಿಲುಗಡೆ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಗೋ ಕಳವಿಗೂ ಯತ್ನ

ರಥಬೀದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗೋವುಗಳ ಕಳ್ಳತನಕ್ಕೂ ಎರಡು ಬಾರಿ ವಿಫಲ ಯತ್ನ ನಡೆದಿದ್ದು, ಈ ಕುರಿತು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಭಾಗದಲ್ಲಿ ಮನೆಗಳು ವಿರಳವಾಗಿದ್ದು, ರಾತ್ರಿ ವೇಳೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವ ಅನುಮಾನ ವ್ಯಕ್ತವಾಗಿದೆ.

1998ರಲ್ಲೇ ಸ್ಥಳ ಮೀಸಲಾತಿ

ಈ ದೇವಳಕ್ಕೆ 350 ವರ್ಷಗಳ ಇತಿಹಾಸವಿದ್ದು, ವಿಶೇಷ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಈ ಕಾರಣಕ್ಕಾಗಿ 1998ರಲ್ಲೇ ಗ್ರಾಮ ಪಂಚಾಯಿತಿ ರಥಬೀದಿಯನ್ನು ಜಾತ್ರೆಗೆಂದು ಮೀಸಲಿಟ್ಟಿತ್ತು. ಇತ್ತೀಚೆಗಷ್ಟೇ ನಡೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆಯಲ್ಲಿ ವಾಹನ ನಿಲುಗಡೆ ನಿಷೇಧೀಸಿ ನಿರ್ಣಯ ಕೈಗೊಂಡಿತ್ತು.

ಗ್ರಾಮ ಪಂಚಾಯಿತಿ ವಿಶೇಷ ಸಭೆಯಲ್ಲಿ ರಥಬೀದಿಯನ್ನು ರಥೋತ್ಸವದ ಜಾತ್ರೆಗಾಗಿಯೇ ಕಾಯ್ದಿರಿಸಲಾಗಿದೆ ಎಂಬ ನಿರ್ಣಯವನ್ನು ಕೈಗೊಂಡು ರಥಬೀದಿಯಲ್ಲಿ ಈ ಬಗ್ಗೆ ನಾಮಫಲಕ ಅಳವಡಿಸಲಾಗಿದೆ. ಆದೇಶ ಉಲ್ಲಂಘಿಸಿ ರಥಬೀದಿಯ ಪಾವಿತ್ರೃ ಹಾಳು ಮಾಡುವ ಮತ್ತು ರಥಬೀದಿಯಲ್ಲಿ ಅನಧಿಕೃತ ರಿಕ್ಷಾ ನಿಲ್ದಾಣ ಮಾಡುವ ಸಂಚು ನಡೆಯುತ್ತಿದೆ. ಅಧಿಕಾರಿಗಳು ಸೂಕ್ತ ಕಾನೂನು ಕ್ರಮಕೈಗೊಂಡು ರಥಬೀದಿ ಉಳಿಸಬೇಕು.-ರಾಘವೇಂದ್ರ ಪೈ, ಗಂಗೊಳ್ಳಿ ಗ್ರಾಪಂ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net