

ವಿಜಯವಾಣಿ ಸುದ್ದಿಜಾಲ ಉಡುಪಿ
ಓಮನ್ ದೇಶದ ಬೋಟಿನೊಂದಿಗೆ ಭಾರತೀಯ ಜಲಸೀಮೆಯನ್ನು ಅಕ್ರಮವಾಗಿ ಪ್ರವೇಶಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಆಪಾದಿತರಿಗೆ ನ್ಯಾಯಾಲಯ ದಂಡ ವಿಧಿಸಿದೆ.
ಭಾರತೀಯ ಪ್ರಜೆಗಳಾದ ಜೇಮ್ಸ್ ಫ್ರಾಂಕ್ಲಿನ್, ರಾಬಿನ್ಸ್ಟನ್ ಹಾಗೂ ಟಿರೋಸ್ ಡಿರೋಸ್ ಎಂಬವರು ಆಪಾದಿತರಾಗಿದ್ದು, ಪ್ರಿನ್ಸಿಪಲ್ (ಸೀನಿಯರ್) ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯವು ಇಬ್ಬರಿಗೆ ತಲಾ 10 ಸಾವಿರ ರೂ. ಹಾಗೂ ಇನ್ನೋರ್ವನಿಗೆ 60 ಸಾವಿರ ರೂ. ಸೇರಿ ಒಟ್ಟು 80 ಸಾವಿರ ರೂ. ದಂಡ ವಿಧಿಸಿದೆ ಎಂದು ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರ ಉಡುಪಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳೂರು ಕೋಸ್ಟ್ ಗಾರ್ಡ್ ಪ್ರಧಾನ ಅಧಿಕಾರಿ ಸುಖ್ವಿಂದರ್ ಸಿಂಗ್ ಅವರು 2025ರ ಫೆ.24ರಂದು ಸಿಬ್ಬಂದಿಯೊಂದಿಗೆ ಸಮುದ್ರ ಗಸ್ತಿನಲ್ಲಿರುವಾಗ ಓಮನ್ ದೇಶದ ಬೋಟ್ ಹಾಗೂ ಅದರಲ್ಲಿ ಮೂವರು ಮೀನುಗಾರರು ಅಕ್ರಮವಾಗಿ ಭಾರತೀಯ ಜಲಸೀಮೆಯೊಳಗೆ ಪ್ರವೇಶಿಸಿರುವುದು ಕಂಡು ಬಂದಿತ್ತು. ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರು ನೀಡಿದ್ದು, ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಲೋಕೇಶ ಎ.ಸಿ. ಈ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಭಾರತೀಯ ಪ್ರಜೆಗಳಾದ ಅವರೆಲ್ಲರೂ ಓಮಾನ್ ದೇಶದಲ್ಲಿ ಮೀನುಗಾರಿಕಾ ಕೆಲಸಕ್ಕೆಂದು ಹೋಗಿದ್ದು, ವಿದೇಶದಲ್ಲಿ ಸಂಪಾದನೆ ಕುಂಠಿತಗೊಂಡಿತ್ತು. ಹೀಗಾಗಿ ಮೂಲ ಪಾಸ್ಪೋರ್ಟ್ ಓಮಾನ್ ದೇಶದ ಬೋಟ್ನ ಮಾಲೀಕನಾದ ಅಬ್ದುಲ್ಲಾ ಎಂಬಾತನ ಬಳಿಯಲ್ಲಿತ್ತು. ಸ್ವದೇಶಕ್ಕೆ ಹಿಂದಿರುಗಲು ಮೂಲ ಪಾಸ್ಪೋರ್ಟ್ ಕೇಳಿದರೂ ಮಾಲೀಕ ನೀಡದ ಕಾರಣದಿಂದ ಆತನ ಬೋಟ್ನೊಂದಿಗೆ ಮೂವರೂ ಸ್ವದೇಶಕ್ಕೆ ಬಂದಿದ್ದರು.
ಯಾವುದೇ ಮೂಲ ಪಾಸ್ಪೋರ್ಟ್ ಹಾಗೂ ಪರವಾನಗಿ ಇಲ್ಲದೆ ಭಾರತೀಯ ಜಲಸೀಮೆಯೊಳಗೆ ವಿದೇಶದ ಬೋಟ್ನೊಂದಿಗೆ ಅಕ್ರಮವಾಗಿ ಪ್ರವೇಶ ಮಾಡಿದ್ದರು. ಈ ಕುರಿತಂತೆ ಮಲ್ಪೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರು ಹಾಗೂ ಇತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಎಸ್ಪಿ ಮಲ್ಪೆಯ ಪಿಎಸ್ಐ ಶಿವಶಂಕರ ಅವರು ತನಿಖೆ ನಡೆಸಿ, 33 ಸಾಕ್ಷಿದಾರರ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.