

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಇಲ್ಲಿನ ಮುಖ್ಯ ಬೀಚ್ನಲ್ಲಿ ಯಾವುದೇ ಪರವಾನಗಿ ಪಡೆಯದೆ ಪ್ರಭಾವಿಯೊಬ್ಬರು ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಈ ಕುರಿತು ಟೆಂಡರ್ ಪಡೆದ ವಿಶ್ರುಧ್ ಬೀಚ್ ಅಭಿವೃದ್ಧಿ ಸಮಿತಿ ಜಿಲ್ಲಾಧಿಕಾರಿಗೆ ಮಂಗಳವಾರ ದೂರು ನೀಡಿದೆ.
ಶನಿವಾರ ಪ್ರವಾಸೋದ್ಯಮ ಇಲಾಖೆ ಜಾಗದಲ್ಲಿ ಕಟ್ಟಡ ನಿರ್ಮಾಣ ಆರಂಭಿಸಿದ್ದು, ಸಮಿತಿಯು ಈ ಕುರಿತು ಕಟ್ಟಡ ಗುತ್ತಿಗೆದಾರರಿಗೆ ಅನುಮತಿ ಪಡೆಯುವಂತೆ ಎಚ್ಚರಿಸಿತ್ತು. ಆದರೂ ಎಚ್ಚರಿಕೆ ಉಲ್ಲಂಘಿಸಿ ಕಾಮಗಾರಿ ಮುಂದುವರಿಸಿದ್ದು, ಭಾನುವಾರ ಸಮಿತಿ ಸದಸ್ಯರು ಸ್ಥಳಕ್ಕೆ ತೆರಳಿ ಪರವಾನಗಿ ಕೇಳಿದಾಗ ಸದಸ್ಯರನ್ನೇ ಗದರಿಸಿದ್ದಾರೆ.
ಈ ಕುರಿತು ಪಡುಬಿದ್ರಿ ಪಿಡಿಒಗೆ ಮೌಖಿಕ ದೂರು ನೀಡಲಾಗಿದ್ದು, ಪಿಡಿಒ ಕೂಡ ಅಕ್ರಮ ಕಾಮಗಾರಿ ನಿಲ್ಲಿಸಲು ಮೌಖಿಕ ಸೂಚನೆ ನೀಡಿದ್ದರು. ಇತ್ತ ಪರವಾನಗಿಯೂ ಪಡೆಯುದೆ, ಪಿಡಿಒ ಸೂಚನೆಯನ್ನೂ ಧಿಕ್ಕರಿಸಿ ಕಾಮಗಾರಿ ಮುಂದುವರಿಸಿದ್ದು, ಮುಂದೆ ನಡೆಯುವ ಅನಾಹುತಗಳಿಗೆ ಟೆಂಡರ್ ಪಡೆದ ಸಮಿತಿ ಜವಾಬ್ದಾರರಾಗುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಡುಬಿದ್ರಿ ಗ್ರಾಪಂ ಪಿಡಿಒ ಮಂಜುನಾಥ ಪಿ ಶೆಟ್ಟಿ ಪ್ರತಿಕ್ರಿಯಿಸಿದ್ದು, ಅಕ್ರಮ ಕಾಮಗಾರಿ ಬಗ್ಗೆ ಮೌಖಿಕ ದೂರು ಬಂದಿದೆ. ಲಿಖಿತ ದೂರು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬೀಚ್ನಲ್ಲಿ ಅಕ್ರಮ ಕಟ್ಟಡ ನಿರ್ಮಿಸುತ್ತಿರುವಾತ ಈ ಮೊದಲು ಕಟ್ಟಡ ನಿರ್ಮಾಣ ಬಗ್ಗೆ ಇಲಾಖೆಯೊಂದಿಗೆ ಮಾತನಾಡಿದ್ದರು. ಅ ವೇಳೆ ಪರವಾನಗಿ ಪಡೆದು ಕಟ್ಟಟಡ ನಿರ್ಮಾಣ ಮಾಡುವಂತೆ ತಿಳಿಸಲಾಗಿತ್ತು. ಇದೀಗ ಅಕ್ರಮ ಕಟ್ಟಡ ನಿರ್ಮಾಣ ಬಗ್ಗೆ ಇಲಾಖೆ ಗಮನಕ್ಕೆ ಬಂದಿದ್ದು, ಸಮಿತಿ ಜಿಲ್ಲಾಧಿಕಾರಿಗೆ ದೂರು ನೀಡಿದೆ. ಜಿಲ್ಲಾಧಿಕಾರಿ ಆದೇಶದಂತೆ ಕ್ರಮ ವಹಿಸಲಾಗುವುದು-ಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ