ನಿರ್ಭಯವಾಗಿ ನಡೆಯುತ್ತಿದೆ ಅಭಯಾರಣ್ಯಗಳಲ್ಲಿ ಕಳ್ಳಬೇಟೆ: ಲಾಕ್​ಡೌನ್ ವರದಾನವಾಯಿತೆ?

deer
Published on

ಬೆಂಗಳೂರು: ಇದು ಲಾಕ್​ಡೌನ್ ಸಮಯ. ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗಿ ಪ್ರಾಣಿ, ಪಕ್ಷಿಗಳು ಕಾಡು, ಗೂಡು ಬಿಟ್ಟು ಸ್ವಚ್ಛಂದವಾಗಿ ತುಸು ಹೊತ್ತು ಊರಿನತ್ತಲೂ ಸುಳಿದಾಡುತ್ತಿವೆ. ಆದರೆ ಆತಂಕಕಾರಿ ಸಂಗತಿ ಎಂದರೆ ಲಾಕ್​ಡೌನ್ ನ ಈ ಸಮಯ ಕಾಡು ಪ್ರಾಣಿಗಳ್ಳರಿಗೆ ವರದಾನವಾದಂತಿದೆ.

ಅಭಯಾರಣ್ಯಗಳಲ್ಲಿ ಬೇಟೆಗಾರರು ಯತೇಚ್ಛವಾಗಿ ಕಳ್ಳಬೇಟೆಯಾಡುತ್ತಿದ್ದು, ಇತ್ತೀಚೆಗೆ ವರದಿಯಾದ ಕಳ್ಳಬೇಟೆ ಪ್ರಕಟಣೆಗಳೇ ಇದಕ್ಕೆ ಸಾಕ್ಷಿಯಾಗಿವೆ.

ಲಾಕ್​​ಡೌನ್ ಜಾರಿಯಾಗಿದ್ದಾಗ ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಬೇಟೆಯಾಡಿದ 8 ಪ್ರಕರಣಗಳು ದಾಖಲಾಗಿದ್ದವು. ಇದೀಗ ಮತ್ತೆ ಲಾಕ್ ಡೌನ್ ಜಾರಿಯಾಗಿರುವುದರಿಂದ ಅರಣ್ಯಾಧಿಕಾರಿಗಳು ಎಚ್ಚರಿಕೆವಹಿಸಬೇಕಾಗಿದೆ.

ಇತ್ತೀಚೆಗೆ ಅರಣ್ಯಾಧಿಕಾರಿಗಳಿಳು ಮಾಹಿತಿಯೊಂದರ ಆಧಾರದ ಮೇಲೆ ವೀರನಹೊಸಳ್ಳಿ ವಲಯದ ಒಂದು ಮನೆ ಮೇಲೆ ದಾಳಿ ನಡೆಸಿದಾಗ ಅಲ್ಲಿ ಸಾಂಬಾರ್ ಜಿಂಕೆಯ ಅಂಗಗಳು ಸಿಕ್ಕಿವೆಯಾದರೂ ಕಳ್ಳಬೇಟೆಯಾಡಿದ ಆರೋಪಿಗಳು ಸಿಕ್ಕಿಲ್ಲ. ಬೆಂಗಳೂರಿನಲ್ಲಿರುವ ಈ ಸ್ಥಳದ ಮಾಲೀಕರು ಲಾಕ್ ಡೌನ್ ನಿಂದಾಗಿ ಓಡಾಡಲು ಅಸಾಧ್ಯವಾಗಿರುವುದರಿಂದ ಈ ಸ್ಥಳ ಕಳ್ಳರಿಗೆ ವರದಾನವಾದಂತಾಗಿದೆ.

ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಗುಪ್ತಚರ ಮಾಹಿತಿಯಾಧಾರದ ಮೇಲೆ ಅರಣ್ಯಾಧಿಕಾರಿಗಳು ಆ ಸ್ಥಳ ತಲುಪುವಷ್ಟೊತ್ತಿಗೆ ಸಾಂಬಾರ ಜಿಂಕೆಯೊಂದಿಗೆ ಬೇಟೆಗಾರರು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಬಗ್ಗೆ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ನಾಗರಹೊಳೆ ಹುಲಿ ಅಭಯಾರಣ್ಯ ನಿರ್ದೇಶಕ ಮಹೇಶ್ ಕೆ, ಎಲ್ಲಾ ಮೂಲಗಳಿಂದ ಮಾಹಿತಿ ಪಡೆಯುತ್ತಿದ್ದು, ಶೀಘ್ರ ಬೇಟೆಗಾರರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net