ಐದು ವರ್ಷಗಳ ಶ್ರಮಕ್ಕೆ ದಕ್ಕಿದ ಐಎಫ್​ಎಸ್ ಹುದ್ದೆ| IFS

Untitled design
Published on

IFS; ಸಂಡೇಗೆಸ್ಟ್ ನಮ್ರತಾ.ಎನ್ ಐಎಫ್​ಎಸ್​ನಲ್ಲಿ 17ನೇ ರ‍್ಯಾಂಕ್ ಬ್ಲರ್ಬ್ ಐದು ವರ್ಷಗಳ ಓದಿನ ಚಾರಣದಲ್ಲಿ ಯುಪಿಎಸ್​ಸಿ ‘ಬೇಸ್ ಕ್ಯಾಂಪ್’ ಕೂಡ ದಾಟಿರಲಿಲ್ಲ...! ಆದರೂ ನಿರಂತರ ಪ್ರಯತ್ನ ಕೈಬಿಡದೆ ಒಂದೇ ವರ್ಷದಲ್ಲಿ ಉನ್ನತ ಹುದ್ದೆಯ ‘ಹಿಮಾಲಯ’ವೇರಿದ ಸಾಧಕಿ ಬೆಂಗಳೂರಿನ ಎನ್. ನಮ್ರತಾ. ಅಖಿಲ ಭಾರತ ಮಟ್ಟದಲ್ಲಿ 17ನೇ ರ‍್ಯಾಂಕ್ ಗಳಿಸಿ ರಾಜ್ಯಕ್ಕೆ ಎರಡನೆಯವರಾಗಿ ಐಎಫ್​ಎಸ್ ಹುದ್ದೆ ಗಿಟ್ಟಿಸಿದ್ದಾರೆ. ತಮ್ಮ ‘ಏರು’ ಹಾದಿಗುಂಟದ ಅನುಭವವನ್ನು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರನ ಸಂಡೇ ಗೆಸ್ಟ್ ಆಗಿ ಹಂಚಿಕೊಂಡು ಸ್ಪರ್ಧಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

‘ಯಶಸ್ಸು’ ಎನ್ನುವುದು ಪರಿಶ್ರಮ ಹಾಗೂ ಆತ್ಮವಿಶ್ವಾಸದ ಸಂಕೇತ. ಎನೇನೋ ಕನಸುಹೊತ್ತು ಯುಪಿಎಸ್ಸಿಯತ್ತ ಧಾವಿಸುವ ಆಕಾಂಕ್ಷಿಗಳಿಗೆ ದೃಢ ನಿಲುವು ಬಹಳ ಮುಖ್ಯ. ಏಕೆಂದರೆ ಇದೊಂದು ಸುದೀರ್ಘ ಪಯಣ. ಏರಿಳಿತಗಳು ಇದ್ದೇ ಇರುತ್ತವೆ. ಯಾವುದೇ ಪರಿಸ್ಥಿತಿಗೂ ಕುಗ್ಗಬಾರದು. ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದೊಂದಿಗೆ ನಮ್ಮ ಪಯಣ ಮುಂದುವರಿಯುತ್ತಲೇ ಇರಬೇಕು ಎನ್ನುತ್ತಾರೆ ನಮ್ರತಾ. ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಐಟಿ ಉದ್ಯೋಗಿಯಾಗಿದ್ದ ನನಗೆ ಅಪೂರ್ಣ ಭಾವ ಕಾಡಿದಾಗ, ನನ್ನೆದುರಿಗೆ ಮೂಡಿಬಂದಿದ್ದು ಯುಪಿಎಸ್ಸಿ ಪರೀಕ್ಷೆ. 2020ರಲ್ಲಿ ಓದು ಪ್ರಾರಂಭಿಸಿದ ನನಗೆ ಮೊದಲಿಗೆ ಮಾರ್ಗದರ್ಶನದ ಕೊರತೆ ಕಾಡಿತು. ಆದರೆ 2ನೇ ಬಾರಿ ಪರೀಕ್ಷೆ ಬರೆದ ನಂತರ ಅದರ ಆಳ ಅರಿತೆ. ಕೋಚಿಂಗ್​ಗೆ ತೆರಳಿ ಅಭ್ಯಾಸ ನಡೆಸಿದೆ. ಕೋಚಿಂಗ್ ನಮ್ಮ ಓದಿಗೆ ದಾರಿ ತೋರಿಸುತ್ತದಷ್ಟೇ. ನಮ್ಮ ಪ್ರಯಾಣದುದ್ದಕ್ಕೂ ಇರುವುದಿಲ್ಲ. ಆದ್ದರಿಂದ ‘ಸೆಲ್ಪ್ ಸ್ಟಡಿ’ ಹಾಗೂ ಆನ್​ಲೈನ್ ಕ್ಲಾಸ್’ ಮೊರೆ ಹೋದೆ. ದಿನಕ್ಕೆ 8-10 ತಾಸು ಓದುವ ಕ್ರಮ ನನ್ನದಾಗಿತ್ತು. ಸ್ಥಿರತೆ ಮತ್ತು ಪ್ರಾಮಾಣಿಕತೆ ಜತೆ ಸಾಗಿದ ಪಯಣ ಯುಪಿಎಸ್ಸಿ ಎಂಬ ಯಶಸ್ಸಿನ ನಿಲ್ದಾಣದಲ್ಲಿ ತಂದು ನಿಲ್ಲಿಸಿದೆ.

ಅಧ್ಯಯನದ ಸೂತ್ರ

ಪ್ರಾರಂಭದಲ್ಲಿ ಪರೀಕ್ಷಾ ಮಾದರಿಯ ಅರಿವಿನ ಅಗತ್ಯವಿರುತ್ತದೆ. ಆದ್ದರಿಂದ ಯುಪಿಎಸ್ಸಿ ಅಧ್ಯಯನ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳಿಂದಲೇ ಪ್ರಾರಂಭವಾಗಬೇಕು. ಇಲ್ಲಿ ನಮಗೆ ಪರೀಕ್ಷೆಯ ಸ್ವರೂಪವಷ್ಟೇ ಅಲ್ಲ, ಯಾವ ವಿಷಯವನ್ನು ಎಷ್ಟು ಓದಬೇಕು? ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕು? ಎನ್ನುವುದನ್ನು ಗ್ರಹಿಸುವುದರ ಜತೆಗೆ ಅನಗತ್ಯ ಓದಿನ ಕ್ರಮವನ್ನು ತಡೆಯಲು ಅಗತ್ಯ ಮಾರ್ಗವನ್ನು ಸೂಚಿಸುತ್ತದೆ. ಪ್ರಿಲಿಮ್ಸ್​ನ ಮತ್ತು ಮೇನ್ ಪರೀಕ್ಷೆಗಳಿಗೆ ಅಧ್ಯಯನ ಕ್ರಮ ಬೇರೆ ಇರಲಿ. ಆದರೆ, ಅಭ್ಯಾಸ ಪ್ರಾರಂಭದಿಂದಲೇ ಸಾಗಲಿ. ಪ್ರತ್ಯೇಕವಾಗಿ ಅಧ್ಯಯನ ಮಾಡಿದರೆ ಮುಖ್ಯ ಪರೀಕ್ಷೆಗೆ ಸಾಕಷ್ಟು ಸಮಯ ನೀಡಲು ಆಗುವುದಿಲ್ಲ. ಆದ್ದರಿಂದ ಇಲ್ಲಿ ಸಮಯ ನಿರ್ವಹಣೆ ಮುಖ್ಯವಾಗುತ್ತದೆ.

‘ಅಭಿಪ್ರಾಯ’ ಕೇಳುವ ಸಂದರ್ಶನ

ಯುಪಿಎಸ್ಸಿ ಪರೀಕ್ಷೆಯಲ್ಲಿ ಸಂದರ್ಶನ ಎನ್ನವುದು ನಿಗೂಢ. ಸಂದರ್ಶಕರ ಎದುರು ಹಾಜರಾಗುವವರೆಗೂ ಯಾವ ವಿಷಯದ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ ಎನ್ನುವುದು ಗ್ರಹಿಕೆಗೆ ಬರುವುದಿಲ್ಲ. ಪ್ರಶ್ನೆ ಡಿಎಎಫ್​ನಿಂದಲಾದರೂ ಬರಬಹದು ಅಥವಾ ಪ್ರಚಲಿತ ವಿದ್ಯಮಾನದ ಮೇಲೂ ಕೇಳಬಹುದು. ಅಲ್ಲಿ ಕೇಳುವ ಪ್ರಶ್ನೆಗಳು ನಮ್ಮ ಅಭಿಪ್ರಾಯ ಏನು? ಎನ್ನುವುದರ ಮೇಲೆಯೇ ಜನ್ಮ ತಾಳಿರುತ್ತವೆ. ಅಭಿಪ್ರಾಯವನ್ನು ಬಿಲ್ಡ್ ಮಾಡಬೇಕೆಂದರೆ ನಮಗೆ ಆಳವಾದ ಅಧ್ಯಯನದ ಅಗತ್ಯವಿರುತ್ತದೆ. ಅದಕ್ಕೆ ದಿನಪತ್ರಿಕೆ ಓದು ಅಗತ್ಯ. ಆದ್ದರಿಂದ ಡಿಎಎಫ್​ನಲ್ಲಿ ನಮೂದಿಸಿದ ವಿಷಯ ಹಾಗೂ ಪ್ರಚಲಿತ ವಿದ್ಯಮಾನದ ಆಳವಾಗಿ ಅರಿತಿರೆ ಸಂದರ್ಶನದ ಹಾದಿ ಸುಲಭ ಎನ್ನುವುದು ನಮ್ರತಾ ಅಭಿಪ್ರಾಯ.

ಇಷ್ಟದ ವಿಷಯವೇ ಐಚ್ಛಿಕವಾಗಿರಲಿ

ನಾವು ಕಷ್ಟದ ವಿಷಯ ಆಯ್ದುಕೊಂಡು ಓದುವುದಕ್ಕಿಂತ, ಇಷ್ಟದ ವಿಷಯವನ್ನು ಓದಿದರೆ ಉತ್ತಮವಲ್ಲವೇ? ಇದರಿಂದ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ವಿಷಯದಲ್ಲಿ ಹೆಚ್ಚಿನ ಅಂಕ ಪಡೆವ ಅಗತ್ಯವಿದೆ. ಆದ್ದರಿಂದ ಆಸಕ್ತಿ ಹಾಗೂ ಆಳಜ್ಞಾನ ಹೊಂದಿರುವ ವಿಷಯವನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳುವುದು ಸೂಕ್ತ ಎನ್ನುತ್ತಾರೆ ನಮ್ರತಾ.

ಕುಟುಂಬದ ಸಹಕಾರ

ಯುಪಿಎಸ್ಸಿಯಂತಹ ಪರೀಕ್ಷೆಗಳು ದೀರ್ಘ ಓದನ್ನು ಬಯಸುತ್ತವೆ. ನಮ್ಮ ಆಸಕ್ತಿಯೊಂದಿಗೆ ಮನೆಯವರ ಸಹಕಾರವೂ ಆಕಾಂಕ್ಷಿಗಳ ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತದೆ. ಉದ್ಯೋಗ ತೊರೆದು ಯುಪಿಎಸ್ಸಿ ಓದಿಗೆ ಕುಳಿತ ಪ್ರಾರಂಭದಿಂದಲೂ ಕುಟುಂಬ ಇವರ ಜತೆಗೆ ನಿಂತಿದೆ. ತಂದೆ ನರಸಿಂಹ ಮೂರ್ತಿ ಕೆಪಿಟಿಸಿಎಲ್ ನಿವೃತ್ತ ಉದ್ಯೋಗಿ. ತಾಯಿ ನಳಿನಾ ಬ್ಯಾಂಕಿನ ನಿವೃತ್ತ ನೌಕರರು, ಅಣ್ಣ ನಿಖಿಲ್ ಐಟಿ ಉದ್ಯೋಗಿಯಾಗಿದ್ದಾರೆ.

ಭೀಮಸಿ; ಕೋಳೆಪ್ಪನವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net