

ಪಣಜಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜತೆಗೆ ಬಾಕ್ಸ್ ಆಫೀಸ್ ಧೂಳೀಪಟ ಮಾಡಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕವಾಗಿ ಪ್ರತಿಕ್ರಿಯೆ ಪಡೆಯುವುದರ ಜತೆಗೆ, ಒಂದು ವರ್ಗದ ಜನ ಈ ಚಿತ್ರವನ್ನು ಟೀಕೆ ಮಾಡಿದ್ದರು. ಇದೀಗ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮುಖ್ಯಸ್ಥರು ಚಲನಚಿತ್ರವನ್ನು ಅಸಭ್ಯ ಎನ್ನುವುದರ ಜತೆಗೆ, ಅದೊಂದು ಕೆಟ್ಟ ಚಿತ್ರ ಎಂದು ಕರೆದಿದ್ದಾರೆ.
ಇಸ್ರೇಲಿ ಚಲನಚಿತ್ರ ನಿರ್ಮಾಪಕ ಮತ್ತು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI), ಜ್ಯೂರಿ ಮುಖ್ಯಸ್ಥರಾದ ನಾಡವ್ ಲ್ಯಾಪಿಡ್ ಅವರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಟೀಕಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಭರದಲ್ಲಿ, 'ಈ ಚಿತ್ರ ನೋಡಿ ಆಘಾತವಾಯಿತು. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲದ ಚಿತ್ರವಾಗಿದೆ. 'ದಿ ಕಾಶ್ಮೀರ್ ಫೈಲ್ಸ್' ಬರೀ ಅಸಭ್ಯ ಚಿತ್ರವಷ್ಟೇ ಅಲ್ಲ, ಅದೊಂದು ಕೆಟ್ಟ ಚಿತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇನ್ನಷ್ಟು ಮಾತನಾಡಿರುವ ಅವರು, 'ಇಂತಹ ದೊಡ್ಡ ಚಿತ್ರೋತ್ಸವದಲ್ಲಿ ವಿಮರ್ಶಕಾತ್ಮಕವಾಗಿ ಮಾತನಾಡಬಹುದು. ಇಲ್ಲಿ ಚರ್ಚೆ ಸಾಧ್ಯವಿರುವುದರಿಂದ, ನಾನು ಇಲ್ಲಿ ಬಹಿರಂಗವಾಗಿಯೇ ಈ ಚಿತ್ರದ ಬಗ್ಗೆ ನನ್ನ ಅಸಮಾಧಾನವನ್ನು ತೋಡಿಕೊಳ್ಳುತ್ತಿದ್ದೇನೆ' ಎಂದು ಹೇಳಿಕೊಂಡಿದ್ದಾರೆ,
1990ರ ದಶಕದಲ್ಲಿ ಕಾಶ್ಮೀರದಿಂದ ಕಾಶ್ಮೀರಿ ಹಿಂದೂಗಳ ನಿರ್ಗಮನದ ಸುತ್ತ ಬೆಳಕು ಚೆಲ್ಲುವ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವು ಈ ವರ್ಷ ಮಾರ್ಚ್ 11 ರಂದು ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿತ್ತು. ಚಿತ್ರದಲ್ಲಿ ಅನಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಷಿ ಮುಂತಾದವರು ಕಾಣಿಸಿಕೊಂಡಿದ್ದಾರೆ.