ಕಾಯಕದಲ್ಲಿ ನಂಬಿಕೆಯಿದ್ದರೆ ಯಶಸ್ಸು ಖಂಡಿತ

If you believe in Kayak, success is sure
ವಿಜಯಪುರ ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಅಭಿನಂದನೆ ಸಮಾರಂಭದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸನ್ಮಾನಿಸಲಾಯಿತು. ಸಿದ್ದರಾಮಪ್ಪ ಉಪ್ಪಿನ, ಬಸಯ್ಯ ಸ್ವಾಮಿ ಹಿರೇಮಠ, ಸಂ.ಗು. ಸಜ್ಜನ, ಶರಣ ಮಳಖೇಡ್ಕರ ಇತರರಿದ್ದಾರೆ.
Published on

ವಿಜಯಪುರ : ನಾವು ಯಾವುದೇ ಕೆಲಸ ಮಾಡಿದರೂ ಅದರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಕಾಯಕದಲ್ಲಿ ನಿಯತ್ತು ಇದ್ದರೆ ಎಂತಹ ಪರಿಸ್ಥಿತಿಯಲ್ಲಿಯೂ ಯಶಸ್ಸು ನಮ್ಮನ್ನು ಅರಸಿ ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿ, ಜನತೆಗೆ ನಾವು ನಿಷ್ಟೆಯಿಂದ ಕೆಲಸ ಮಾಡಿದ್ದರಿಂದ ಅವರು ಆಶೀರ್ವದಿಸಿದ್ದಾರೆ. ಬೇರೊಬ್ಬರ ದುಡ್ಡಿಗೆ ಆಸೆ ಪಡದೆ ನಡೆದುಕೊಂಡಾಗ ದೇವರೂ ಎಲ್ಲಾದರೊಂದು ಕಡೆ ಕೈ ಹಿಡಿದೇ ಹಿಡಿಯುತ್ತಾನೆ ಎಂದರು.

ಸಿದ್ಧೇಶ್ವರ ಸಂಸ್ಥೆ ಮೂಲಕ ಸಾಕಷ್ಟು ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದರೂ ಆರೋಗ್ಯ ಕ್ಷೇತ್ರದಲ್ಲಿ ಇಲ್ಲವಲ್ಲ ಎಂಬ ಅಳುಕಿತ್ತು. ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿ, ಅದನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹಾಗೆಯೇ ಸಿದ್ಧೇಶ್ವರ ಸಂಸ್ಥೆಯ ಮೂಲಕ ಹತ್ತಾರು ಶಾಲೆಗಳನ್ನು ನಿರ್ಮಾಣ ಮಾಡಿ ಶಿಕ್ಷಣ ಕ್ರಾಂತಿಯಲ್ಲಿ ನಮ್ಮದೊಂದು ಪಾಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎಂದು ಹೇಳಿದರು.

ಮುಂದಿನ ದಿನಮಾನದಲ್ಲಿ ಪೆಟ್ರೋಲ್, ಡಿಸೇಲ್ ಲಭ್ಯತೆ ಕಡಿಮೆಯಾಗುವುದರಿಂದ ಅದಕ್ಕೆ ಪರ್ಯಾಯವಾಗಿ ಇಥೆನಾಲ್ ಬಳಸಿ ವಾಹನ ಚಲಾವಣೆ ಮಾಡುವುದಕ್ಕೆ ಅವಕಾಶ ದೊರೆಯಲಿದ್ದು, ಮುಂದಾಲೋಚನೆಯಿಂದ ಚಿಂಚೊಳಿಯಲ್ಲಿ ಇಥೆನಾಲ್ ತಯಾರಿಕೆ ಕಾರ್ಖಾನೆ ಸ್ಥಾಪನೆ ಮಾಡಲಾಗುತ್ತಿದ್ದು, ಇದಲ್ಲಿ ಸಾವಿರಾರು ಜನರಿಗೆ ಕೆಲಸ ಕೊಡುವುದಕ್ಕೂ ಸಾಧ್ಯವಾಗುತ್ತದೆ ಎಂದರು.

ಶ್ರಿ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಸಿದ್ದರಾಮಪ್ಪ ಉಪ್ಪಿನ, ಸಿದ್ಧೇಶ್ವರ ಸಂಸ್ಥೆ ಚೇರ್ಮನ್ ಬಸಯ್ಯ ಸ್ವಾಮಿ ಹಿರೇಮಠ, ಉಪಾಧ್ಯಕ್ಷ ಸಂ.ಗು. ಸಜ್ಜನ, ಜೆಎಸ್‌ಎಸ್ ಆಸ್ಪತ್ರೆ ಸಿಇಒ ಶರಣ ಮಳಖೇಡ್ಕರ, ಮಂಜುನಾಥ ಜುನಗೊಂಡ ಆಸ್ಪತ್ರೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net