

ಚಂಡೀಗಢ: ಶಾಸಕರ ಬಂಡಾಯದ ನೆರಳಲ್ಲಿ ರಾಜೀನಾಮೆ ನೀಡಿದ ಪಂಜಾಬ್ನ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ತಮ್ಮ ಮುಂದಿನ ರಾಜಕೀಯ ಪ್ರಯಾಣದ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷವು ಮುಂದಿನ ಸಿಎಂ ಆಗಿ ಬಿಂಬಿಸಿದಲ್ಲಿ ಅವರ ವಿರುದ್ಧ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಇಳಿಸುವುದಾಗಿ ಎಚ್ಚರಿಸಿದ್ದಾರೆ.
ಚಂಡೀಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕ್ಯಾಪ್ಟನ್, ಪಕ್ಷವನ್ನು 'ದೆಹಲಿಯಿಂದ ನಡೆಸುತ್ತಿರುವ ರೀತಿ'ಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆ.ಕೆ.ವೇಣುಗೋಪಾಲ್, ಅಜಯ್ ಮಕೇನ್ ಅಥವಾ ರಣದೀಪ್ ಸುರ್ಜೇವಾಲಾರಂಥ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಯಾರು ಯಾವ ಸಚಿವಾಲಯಕ್ಕೆ ಸೂಕ್ತ ಎಂದು ಹೇಗೆ ನಿರ್ಧರಿಸಬಲ್ಲರು ಎಂದು ಪ್ರಶ್ನಿಸಿದ್ದಾರೆ. ತಾವು ಸಿಎಂ ಆಗಿದ್ದಾಗ ತಮಗೆ ಪ್ರತಿಯೊಬ್ಬರ ಸಾಮರ್ಥ್ಯ ತಿಳಿದಿದ್ದರಿಂದ ತಾವೇ ನಿರ್ಧಾರಗಳನ್ನು ತೆಗೆದುಕೊಂಡದ್ದಾಗಿ ಹೇಳಿದ್ದಾರೆ.
ಮಂಗಳವಾರದಂದು ಹೊಸ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಅವರು, ಸಿಧು ಜೊತೆಗೆ ರಾಜಧಾನಿ ದೆಹಲಿಗೆ ರಾಜ್ಯ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡಲು ತೆರಳಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಹೇಳಿಕೆ ನೀಡಿದ್ದಾರೆ. ಮೊದಲ ದಲಿತ ಸಿಎಂ ಆದ ಚನ್ನಿ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಧರ್ಮಗಳು ನಮಗೆ ಎಲ್ಲರೂ ಸಮಾನ ಎಂದು ಹೇಳುತ್ತವೆ. ನಾನು ಜನರನ್ನು ಅವರ ಜಾತಿ ಆಧಾರದ ಮೇಲೆ ನೋಡುವುದಿಲ್ಲ. ಬದಲಿಗೆ ಅವರ ದಕ್ಷತೆ ಮುಖ್ಯ" ಎಂದಿರುವ ಕ್ಯಾಪ್ಟನ್, ಚನ್ನಿ ಆಳ್ವಿಕೆಯಲ್ಲಿ ಸಿಧು ಅವರೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ ಎಂದಿದ್ದಾರೆ.
ಸಿಧು ವಿರುದ್ಧ ಹರಿಹಾಯ್ದಿರುವ ಕ್ಯಾಪ್ಟನ್, ಪಿಸಿಸಿ ಮುಖ್ಯಸ್ಥರು ಪಕ್ಷದ ವ್ಯವಹಾರಗಳ ಮೇಲೆ ಗಮನ ಹರಿಸಬೇಕು. ಅವರು 'ಸೂಪರ್ ಸಿಎಂ' ಆಗಿ ವರ್ತಿಸಿದರೆ, ಪಕ್ಷ ಕಾರ್ಯ ನಿರ್ವಹಿಸುವುದಿಲ್ಲ ಎಂದಿದ್ದಾರೆ. ಜೊತೆಗೇ, ಸಿಧು ಅವರತ್ತಲೇ ಬೆಟ್ಟು ಮಾಡುತ್ತಾ, "ಈ ಡ್ರಾಮಾ ಮಾಸ್ಟರ್ ನಾಯಕತ್ವದಲ್ಲಿ ಕಾಂಗ್ರೆಸ್ ಪಂಜಾಬ್ ಚುನಾವಣೆಗಳಲ್ಲಿ ಎರಡಂಕಿಯನ್ನೂ ತಲುಪುವುದು ಕಷ್ಟವಾದೀತು" ಎಂದು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)