

ನವದೆಹಲಿ: ಪೆಟ್ರೋಲ್, ಡೀಸೆಲ್ನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್ ದರ -ರೂ 75ಕ್ಕೂ, ಡೀಸೆಲ್ ದರ ರೂ 68ಕ್ಕೆ ಇಳಿಯಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)ದ ಅರ್ಥ ಶಾಸ್ತ್ರಜ್ಞರು ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ. ಈ ಕ್ರಮದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಮಾರು 1 ಲಕ್ಷ ಕೋಟಿ ರೂಪಾಯಿ ನಷ್ಟವಾದೀತು. ಇದು ದೇಶದ ಜಿಡಿಪಿಯ ಶೇಕಡ 0.4 ಮಾತ್ರ ಎಂದಿದ್ದಾರೆ.
ಈ ಅಂದಾಜಿಗೆ ಸಾಗಣೆ ವೆಚ್ಚ ಡೀಸೆಲ್ಗೆ -ರೂ 7.25, ಪೆಟ್ರೋಲ್ಗೆ, ರೂ 3.82, ಡೀಲರ್ ಕಮಿಷನ್ ಡೀಸೆಲ್ಗೆ -ರೂ 2.53, ಪೆಟ್ರೋಲ್ಗೆ, ರೂ 3.67, ಸೆಸ್ ಡೀಸೆಲ್ಗೆ 20 ರೂಪಾಯಿ, ಪೆಟ್ರೋಲ್ಗೆ -ರೂ 30 (ಸೆಸ್ ಅನ್ನು ಕೇಂದ್ರ ಮತ್ತು ರಾಜ್ಯಗಳು ಸಮನಾಗಿ ಹಂಚಿಕೊಳ್ಳುತ್ತವೆ) ಮತ್ತು ಜಿಎಸ್ಟಿ ದರ ಶೇಕಡ 28ರ ಲೆಕ್ಕದಲ್ಲಿ ಪರಿಗಣಿಸಲಾಗಿದೆ. ಕಚ್ಚಾ ತೈಲ ಬೆಲೆ ಬ್ಯಾರೆಲ್ ಮೇಲೆ 1 ಡಾಲರ್ ಹೆಚ್ಚಳವಾದರೆ ಪೆಟ್ರೋಲ್ ದರ ಲೀಟರಿಗೆ 50 ಪೈಸೆ ಮತ್ತು ಡೀಸೆಲ್ ದರ ಲೀಟರಿಗೆ ರೂ 1.5 ಹೆಚ್ಚಳವಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ಆದಾಯ -ರೂ 1,500 ಕೋಟಿ ಮಾತ್ರ ವ್ಯತ್ಯಾಸವಾಗುತ್ತದೆ ಎಂಬುದು ಒಟ್ಟಾರೆ ಲೆಕ್ಕಾಚಾರ. ಈಗ ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ಬಂದರೆ ಪ್ರತಿ ಲೀಟರ್ಗೆ -ರೂ 30 ರೂ. ವರೆಗೂ ಇಳಿಕೆಯಾಗಿದೆ.
ರಾಜ್ಯಗಳಿಗೆ ಇದೆ ಲಾಭ: ಪ್ರಸ್ತುತ ತೈಲ ದರವನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ರಾಜ್ಯಗಳ ಆದಾಯ ಸಂಗ್ರಹ ಇಳಿಕೆ ಆಗಲಿದೆ. ಆದರೆ, ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ 10 ಡಾಲರ್ ಇಳಿದ ಸಂದರ್ಭದಲ್ಲಿ ಜಿಎಸ್ಟಿ ವ್ಯಾಪ್ತಿಯಲ್ಲಿ ಇಂಧನದ ಮೂಲದರವನ್ನು ಹಾಗೆಯೇ ಉಳಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 18,000 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಎಸ್ಬಿಐ ಪರಿಣತರ ಅಭಿಮತ.
ಎಲ್ಪಿಜಿ ಸಿಲಿಂಡರ್ ಕಥೆ ಏನು?
ಮುಂದಿನ 5ವರ್ಷಗಳ ಕಾಲ ಎಲ್ಪಿಜಿ ಸಿಲಿಂಡರ್ಗಳನ್ನು ಬಡ ಗ್ರಾಹಕರಿಗೆ ಪೂರೈಸುವಾಗ ಅವರಿಗೆ ಅವರ ಬಳಕೆಯ ಶ್ರೇಣಿ ಆಧರಿಸಿ ಸಹಾಯಧನ ವ್ಯವಸ್ಥೆಯನ್ನು ಮುಂದುವರಿಸಬಹುದು ಎಂದು ಎಸ್ಬಿಐ ಪರಿಣತರು ಸಲಹೆ ನೀಡಿದ್ದಾರೆ.
ಒಪೆಕ್ ಸಭೆಯಲ್ಲಿ ತೈಲದರ ಚರ್ಚೆ
ಒಪೆಕ್+ ರಾಷ್ಟ್ರಗಳ ಆನ್ಲೈನ್ ಸಭೆ ಗುರುವಾರ ನಡೆದಿದ್ದು, ಜಾಗತಿಕವಾಗಿ ಹೆಚ್ಚುತ್ತಿರುವ ತೈಲ ಬೇಡಿಕೆ ಮತ್ತು ಪೂರೈಕೆ ವಿಚಾರ ಚರ್ಚೆಗೆ ಬಂದಿದೆ. ತೈಲ ಉತ್ಪಾದನೆಯನ್ನು ಡಿಸೆಂಬರ್ನಲ್ಲೇ ನಿರ್ಧರಿಸಿದಂತೆ ನಿತ್ಯವೂ 5 ಲಕ್ಷ ಬ್ಯಾರೆಲ್ಗೆ ಏರಿಸುವ ವಿಷಯವನ್ನೂ ತೈಲೋತ್ಪಾದಕ ರಾಷ್ಟ್ರಗಳ ನಾಯಕರು ರ್ಚಚಿಸಿದ್ದರು. ಆದಾಗ್ಯೂ, ಒಪೆಕ್+ ರಾಷ್ಟ್ರಗಳ ನಾಯಕರು ಈ ಕುರಿತ ಖಚಿತ ನಿರ್ಣಯಕ್ಕೆ ಇನ್ನೂ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ದರ ವ್ಯತ್ಯಾಸವಿಲ್ಲ
ಈ ಎಲ್ಲ ಬೆಳವಣಿಗೆಗಳ ನಡುವೆ, ಭಾರತದಲ್ಲಿ ಸತತ ಐದನೇ ದಿನ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.