

ಅಹಮದಾಬಾದ್, ಗುಜರಾತ್: ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎಂದೇ ಖ್ಯಾತಿಗಳಿಸಿರುವ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಲಿರುವ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಸಕಲ ಸಿದ್ಧತೆಗಳೊಂದಿಗೆ ಅಲಂಕೃತವಾಗಿದೆ. ಇದರೊಟ್ಟಿಗೆ ಸಾಕಷ್ಟು ಬದಲಾವಣೆ ಕೂಡ ಮಾಡಿದ್ದು, ಹಲವು ವ್ಯವಸ್ಥೆಗಳನ್ನು ಆಯೋಜಿಸಲಾಗಿದೆ.
ಇಂದು ನಡೆಯಲಿರುವ ವಿಶ್ವಕಪ್ ಫೈನಲ್ ಹಣಾಹಣಿಯನ್ನು ಕಾತರದಿಂದ ಎದುರು ನೋಡುತ್ತಿರುವ ಜಗತ್ತಿಗೆ ಯಾರ ಮುಡಿಗೆ ಗೆಲುವಿನ ಕಿರೀಟ ಸೇರಲಿದೆ ಎಂಬ ಲೆಕ್ಕಾಚಾರಗಳು ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ಹಲವು ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು, ಪಂದ್ಯ ವೀಕ್ಷಣೆಗೆ ಖುದ್ದಾಗಿ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಸ್ಟೇಡಿಯಂನಲ್ಲಿ ಕುಳಿತು ಟೀಮ್ ಇಂಡಿಯಾಗೆ ಪ್ರೋತ್ಸಾಹ ನೀಡುವುದು ಮತ್ತಷ್ಟು ವಿಶೇಷವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಜತೆಗೆ ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಕೂಡ ಪ್ರೇಕ್ಷಕರೊಂದಿಗೆ ಪಂದ್ಯ ವೀಕ್ಷಿಸಲಿದ್ದಾರೆ. 100 ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಸ್ಟೇಡಿಯಂನಲ್ಲಿ ಕಾಣಿಸಿಕೊಳಲಿದ್ದು, ನಗರದಲ್ಲಿ 60ಕ್ಕೂ ಹೆಚ್ಚು ಚಾರ್ಟರ್ಡ್ ವಿಮಾನಗಳು ಬಂದಿಳಿದಿದೆ. ಇದರೊಟ್ಟಿಗೆ 10,000 ಭದ್ರತಾ ಸಿಬ್ಬಂದಿಯನ್ನು ಕೂಡ ನಿಯೋಜಿಸಲಾಗಿದೆ.
ಕಾರ್ಯನಿರ್ವಹಣೆಯನ್ನು ಸುಗುಮಗೊಳಿಸಲು ಅಹಮದಾಬಾದ್ ವಿಮಾನ ನಿಲ್ದಾಣವನ್ನು ಎಲ್ಲಾ ವಿಮಾನ ಸಂಚಾರಕ್ಕಾಗಿ 45 ನಿಮಿಷಗಳ ಕಾಲ ಮುಚ್ಚಲು ನಿರ್ಧರಿಸಲಾಗಿದ್ದು, ವಿಶ್ವಕಪ್ ಗೆದ್ದ ಕ್ಯಾಪ್ಟನ್ಗಳ ಹೆಸರಿನ ಜತೆಗೆ ಇಂದಿನ ಫೈನಲ್ ಗೆಲ್ಲುವ ನಾಯಕನ ಹೆಸರನ್ನು ಸ್ಟೇಡಿಯಂನಲ್ಲಿ ಅನಾವರಣಗೊಳಿಸಲಾಗುತ್ತದೆ. ಇದನ್ನು ಅದ್ಬುತ ಲೈಟಿಂಗ್ಗಳೊಡನೆ ವಿಶೇಷವಾಗಿ ಸೆರೆಹಿಡಿಯಲು 1,200 ಡ್ರೋನ್‌ಗಳನ್ನು ಬಳಸಲಾಗಿದೆ.
ಪಂದ್ಯ ವೀಕ್ಷಣೆಗೆ ಬಂದಿರುವ 1.3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಮನರಂಜಿಸಲು ಬಾಲಿವುಡ್ ಸಂಗೀತ ಸಂಯೋಜಕ ಪ್ರೀತಮ್, ಗಾಯಕರಾದ ಜೋನಿತಾ ಗಾಂಧಿ, ನಕಾಶ್ ಅಜೀಜ್, ಆಕಾಶ ಜೋಶಿ, ತುಷಾರ್ ಜೋಶಿ ಮತ್ತು ಅಮಿತ್ ಮಿಶ್ರಾ ಸಜ್ಜಾಗಿದ್ದಾರೆ. ಮುಂಬೈನ 500ಕ್ಕೂ ಅಧಿಕ ಡ್ಯಾನ್ಸರ್ಸ್ ಜನಪ್ರಿಯ ಬಾಲಿವುಡ್ ಗೀತೆಗಳಿಗೆ ನೃತ್ಯ ಮಾಡಲಿದ್ದಾರೆ.
ಫೈನಲ್ ಪಂದ್ಯಕ್ಕೆ ಮತ್ತಷ್ಟು ಮೆರುಗು ನೀಡಲು ಭಾರತೀಯ ಖ್ಯಾತ ಸೆಲೆಬ್ರಿಟಿಗಳಾದ ರಜನಿಕಾಂತ್, ಶಾರೂಖ್ ಖಾನ್, ಅನುಷ್ಕಾ ಶರ್ಮಾ, ಯಜುವೇಂದ್ರ ಚಹಾಲ್, ಸಾರಾ ತೆಂಡೂಲ್ಕರ್, ಸಚಿನ್ ತೆಂಡೂಲ್ಕರ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಧಾನಶ್ರೀ, ಅಮಿತ್ತಾಬ್ ಬಚ್ಚನ್, ಕಮಲ್ ಹಾಸನ್ ಮುಂತಾದವರು ಹಾಜರಾಗರುವುದು ಬಹುತೇಕ ಖಚಿತವಾಗಿದೆ,(ಏಜೆನ್ಸೀಸ್).