

ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ(Rohit Sharma) ಇತಿಹಾಸ ನಿರ್ಮಿಸಿದ್ದಾರೆ. ತಮ್ಮ 38 ನೇ ವಯಸ್ಸಿನಲ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.
ಇಂದು ಬುಧವಾರ ಬಿಡುಗಡೆಯಾದ ನೂತನ ಏಕದಿನ ಶ್ರೇಯಾಂಕದಲ್ಲಿ ಭಾರತ ಏಕದಿನ ನಾಯಕ ಶುಭಮನ್ ಗಿಲ್ರನ್ನು ಹಿಂದಿಕ್ಕಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಮಾಜಿ ನಾಯಕ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದರು. ಅಸಿಸ್ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಅಜೇಯ ಶತಕ ಸೇರಿದಂತೆ 3 ಪಂದ್ಯಗಳಲ್ಲಿ 101 ಸರಾಸರಿಯಲ್ಲಿ 202 ರನ್ ಗಳಿಸಿದ್ದರು.
ನೂತನವಾಗಿ ಬಿಡುಗಡೆಯಾದ ಒಂಡೇ ಶ್ರೇಯಾಂಕದಲ್ಲಿ 781 ಅಂಕಗಳೊಂದಿಗೆ ಹಿಟ್ಮ್ಯಾನ್ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಅಫ್ಘಾನ್ ಆಟಗಾರ ಇಬ್ರಾಹಿಂ ಜದ್ರಾನ್ 764 ಅಂಕಗಳೊಂದಿಗೆ 2ನೇಯ ಸ್ಥಾನ ಮತ್ತು ಶುಭ್ಮನ್ ಗಿಲ್ 745 ಅಂಕಗಳೊಂದಿಗೆ ಮೂರನೇಯ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿದರು. ಅಸಿಸ್ವಿರುದ್ಧ 237 ಚೇಸಿಂಗ್ನಲ್ಲಿ ಅಜೇಯ 74 ರನ್ ಗಳಿಸಿದರು. ಆದರೆ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ಸೋತಿದ್ದರಿಂದ ವಿರಾಟ್ 725 ರೇಟಿಂಗ್ ಅಂಕಗಳೊಂದಿಗೆ 6 ಸ್ಥಾನಕ್ಕೆ ಕುಸಿದಿದ್ದಾರೆ. ಅಲ್ಲದೆ, ಭಾರತದ ಮಿಡಲ್ ಆರ್ಡರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಶ್ರೇಯಾಂಕದಲ್ಲಿ ಒಂಬತ್ತನೇ ಸ್ಥಾನಕ್ಕೆ ಜಿಗಿದಿದ್ದಾರೆ.
ರೋಹಿತ್ ಶರ್ಮಾ ತಮ್ಮ ಅದ್ಭುತ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಸಿಸಿ ಶ್ರೇಯಾಂಕದಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ಶುಭಮನ್ ಗಿಲ್ ನಂತರ ಏಕದಿನ ಶ್ರೇಯಾಂಕದಲ್ಲಿ ಇತಿಹಾಸದಲ್ಲಿ ನಂಬರ್ ಒನ್ ಪಟ್ಟ ಅಲಂಕರಿಸಿದ 5ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ರೋಹಿತ್ 38 ವರ್ಷ 182 ದಿನಗಳಲ್ಲಿ ನಂಬರ್ ಒನ್ ಸ್ಥಾನವನ್ನು ಗಳಿಸಿದ್ದು ಒಂದು ಸಾಧನೆಯಾಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಅಗ್ರ ಸ್ಥಾನವನ್ನು ತಲುಪಿದ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. (ಏಜೆನ್ಸೀಸ್)