ಕೊನೆಗೂ ಚಾಂಪಿಯನ್ಸ್​ ಟ್ರೋಫಿ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ; ಫೆ. 23ಕ್ಕೆ ದುಬೈನಲ್ಲಿ ಭಾರತ-ಪಾಕ್​ ಫೈಟ್​

web champs
Published on

ನವದೆಹಲಿ: ಮುಂದಿನ ವರ್ಷದ 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ 57 ದಿನಗಳಷ್ಟೇ ಬಾಕಿ ಉಳಿದಿರುವಾಗ ಕೊನೆಗೂ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. "ಮಿನಿ ವಿಶ್ವಕಪ್​' ಖ್ಯಾತಿಯ ಏಕದಿನ ಕ್ರಿಕೆಟ್​ ಟೂರ್ನಿಯ ಆತಿಥ್ಯಕ್ಕೆ ಸಂಬಂಧಿಸಿದ ಬಿಕ್ಕಟ್ಟನ್ನು ಕೆಲದಿನಗಳ ಹಿಂದಷ್ಟೇ ಬಗೆಹರಿಸಿದ್ದ ಐಸಿಸಿ, ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸುವುದಾಗಿ ಘೋಷಿಸಿತ್ತು. ಮಂಗಳವಾರ ಕೊನೆಗೂ ಅಧಿಕೃತವಾಗಿ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಭಾರತ&ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯ 2025ರ ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿದೆ.

ಫೆಬ್ರವರಿ 19ರಂದು ಆತಿಥೇಯ ಹಾಗೂ ಹಾಲಿ ಚಾಂಪಿಯನ್​ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಮರುದಿನ ಅಂದರೆ ಫೆಬ್ರವರಿ 20ರಂದು ಭಾರತ ತಂಡ ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ನಂತರ ಮಾರ್ಚ್​ 2ರಂದು ದುಬೈನಲ್ಲೇ ನ್ಯೂಜಿಲೆಂಡ್​ ವಿರುದ್ಧ ಭಾರತ ತಂಡ ತನ್ನ 3ನೇ ಹಾಗೂ ಕೊನೇ ಲೀಗ್​ ಪಂದ್ಯವನ್ನು ಆಡಲಿದೆ.

19 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್​ ಪಂದ್ಯಗಳು ಮತ್ತು ಒಂದು ಸೆಮಿಫೈನಲ್​ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್​ ಮತ್ತು ಇನ್ನೊಂದು ಸೆಮಿಫೈನಲ್​ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್​ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್​ ಮಾರ್ಚ್​ 2ರಂದು ಲಾಹೋರ್​ನಲ್ಲಿ ನಿಗದಿಯಾಗಿದೆ.

2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಅಗ್ರ 8 ಸ್ಥಾನ ಪಡೆದ ತಂಡಗಳು ಟೂರ್ನಿಗೆ ನೇರಅರ್ಹತೆ ಪಡೆದಿವೆ. ಹೀಗಾಗಿ ಆ ವಿಶ್ವಕಪ್​ನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಶ್ರೀಲಂಕಾ ಮತ್ತು ಆ ವಿಶ್ವಕಪ್​ನಲ್ಲೇ ಆಡಿರದ ವೆಸ್ಟ್​ ಇಂಡೀಸ್​ ತಂಡಗಳು ಅರ್ಹತೆ ಪಡೆದಿಲ್ಲ. ಲಂಕಾ, ವಿಂಡೀಸ್​ ಎರಡೂ ಟೂರ್ನಿಯ ಮಾಜಿ ಚಾಂಪಿಯನ್​ ತಂಡಗಳಾಗಿವೆ. ಅಫ್ಘಾನಿಸ್ತಾನ ಇದೇ ಮೊದಲ ಬಾರಿಗೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡಲಿದೆ. 2017ರಲ್ಲಿ ಕೊನೆಯದಾಗಿ ಈ ಟೂರ್ನಿ ನಡೆದಿತ್ತು ಮತ್ತು 8 ವರ್ಷಗಳ ಬಳಿಕ ಮತ್ತೆ ನಡೆಯುತ್ತಿದೆ.

ಇದು 1996ರ ಏಕದಿನ ವಿಶ್ವಕಪ್​ ಬಳಿಕ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವ ಮೊದಲ ಐಸಿಸಿ ಟೂರ್ನಿಯಾಗಿದೆ. 2027ರವರೆಗೆ ಭಾರತದಲ್ಲಿ ನಿಗದಿಯಾಗಿರುವ ಐಸಿಸಿ ಟೂರ್ನಿಗಳನ್ನೂ ಹೈಬ್ರಿಡ್​ ಮಾದರಿಯಲ್ಲಿ ನಡೆಸುವ ಸೂತ್ರದ ಅನ್ವಯ, ಪಾಕಿಸ್ತಾನ ಈ ಬಾರಿ ಆತಿಥ್ಯವನ್ನು ಉಳಿಸಿಕೊಂಡಿದೆ. ಇದರನ್ವಯ ಈ ಬಾರಿ ದುಬೈ ಅನ್ನು ತಟಸ್ಥ ತಾಣವಾಗಿ ಆರಿಸಲಾಗಿದೆ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್​ ರಾಬಿನ್​ ಲೀಗ್​ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿೈನಲ್​ಗೇರಲಿವೆ.

*ಗುಂಪುಗಳು

ಎ: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್​, ಬಾಂಗ್ಲಾದೇಶ

ಬಿ: ದಣ ಆಫ್ರಿಕಾ, ಆಸ್ಟ್ರೆಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್​

ಲಾಹೋರ್​/ದುಬೈನಲ್ಲಿ ಫೈನಲ್​

ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯ ಮಾರ್ಚ್​ 9ರಂದು ಲಾಹೋರ್​ನಲ್ಲಿ ನಿಗದಿಯಾಗಿದೆ. ಆದರೆ ಭಾರತ ತಂಡ ಫೈನಲ್​ಗೆ ಅರ್ಹತೆ ಪಡೆದರೆ ಈ ಪಂದ್ಯ ದುಬೈನಲ್ಲಿ ನಡೆಯಲಿದೆ. ಮಾರ್ಚ್​ 10 ಫೈನಲ್​ಗೆ ಮೀಸಲು ದಿನವಾಗಿದೆ. 2 ಸೆಮಿಫೈನಲ್​ ಪಂದ್ಯಗಳಿಗೂ ಮೀಸಲು ದಿನವಿದೆ. ಆದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಭಾರತ ತಂಡ ಸೆಮಿಫೈನಲ್​ಗೇರಿದರೆ ದುಬೈನಲ್ಲಿ ಮತ್ತು ಪಾಕಿಸ್ತಾನ ಸೆಮಿಫೈನಲ್​ಗೇರಿದರೆ ಲಾಹೋರ್​ನಲ್ಲಿ ಆಡಲಿದೆ.

ಚಾಂಪಿಯನ್ಸ್​ ಟ್ರೋಫಿ-2025 ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ

ಫೆ.19 ಪಾಕಿಸ್ತಾನ-ನ್ಯೂಜಿಲೆಂಡ್​ ಕರಾಚಿ

ಫೆ. 20 ಬಾಂಗ್ಲಾದೇಶ-ಭಾರತ ದುಬೈ

ಫೆ. 21 ಅಫ್ಘಾನಿಸ್ತಾನ-ದ. ಆಫ್ರಿಕಾ ಕರಾಚಿ

ಫೆ. 22 ಆಸ್ಟ್ರೆಲಿಯಾ-ಇಂಗ್ಲೆಂಡ್​ ಲಾಹೋರ್​

ಫೆ. 23 ಭಾರತ-ಪಾಕಿಸ್ತಾನ ದುಬೈ

ಫೆ. 24 ಬಾಂಗ್ಲಾದೇಶ-ನ್ಯೂಜಿಲೆಂಡ್​ ರಾವಲ್ಪಿಂಡಿ

ಫೆ. 25 ಅಸ್ಟ್ರೆಲಿಯಾ-ದ. ಆಫ್ರಿಕಾ ರಾವಲ್ಪಿಂಡಿ

ಫೆ. 26 ಅಫ್ಘಾನಿಸ್ತಾನ-ಇಂಗ್ಲೆಂಡ್​ ಲಾಹೋರ್​

ಫೆ. 27 ಪಾಕಿಸ್ತಾನ-ಬಾಂಗ್ಲಾದೇಶ ರಾವಲ್ಪಿಂಡಿ

ಫೆ. 28 ಅಫ್ಘಾನಿಸ್ತಾನ-ಆಸ್ಟ್ರೆಲಿಯಾ ಲಾಹೋರ್​

ಮಾ. 1 ದಣ ಆಫ್ರಿಕಾ-ಇಂಗ್ಲೆಂಡ್​ ಕರಾಚಿ

ಮಾ. 2 ಭಾರತ-ನ್ಯೂಜಿಲೆಂಡ್​ ದುಬೈ

ಮಾ. 4 ಸೆಮಿಫೈನಲ್-1 ದುಬೈ

ಮಾ. 5 ಸೆಮಿಫೈನಲ್​-2 ಲಾಹೋರ್​

ಮಾ. 9 ಫೈನಲ್​ -ದುಬೈ/ಲಾಹೋರ್​

ಎಲ್ಲ ಪಂದ್ಯ ಆರಂಭ: ಮಧ್ಯಾಹ್ನ 2.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net