

ಬೆಂಗಳೂರು: ನಿವೃತ್ತಿ, ದೀರ್ಘಕಾಲೀನ ಒಂದೇ ಹುದ್ದೆಯಲ್ಲಿ ಮುಂದುವರಿಕೆ, ಖಾಲಿ ಹುದ್ದೆ ಹೀಗೆ ವಿವಿಧ ಕಾರಣಗಳಿಗೆ ಹಿರಿಯ ಹಾಗೂ ಕಿರಿಯ ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾಯಿಸಿದ್ದು, ಕೆಲವರಿಗೆ ಹೆಚ್ಚುವರಿ ಸಮವರ್ತಿತ ಪ್ರಭಾರ ಜವಾಬ್ದಾರಿ ನೀಡಲಾಗಿದೆ.
ಮಾ.31ರಂದು ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ನಿವೃತ್ತಿಯಾದ ಕಾರಣ ಅವರ ಜವಾಬ್ದಾರಿಯನ್ನು ಹೆಚ್ಚುವರಿ ಪ್ರಭಾರವಾಗಿ ಎಸಿಎಸ್ ವಂದಿತಾ ಶರ್ಮಗೆ ವಹಿಸಲಾಗಿದೆ. ಹಾಗೆಯೇ ಡಿಪಿಎಆರ್ (ಇ ಗೌರ್ನೆನ್ಸ್)ನಲ್ಲಿ ಅಪರ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ ಅವರನ್ನು ಡಿಪಿಎಆರ್(ಆಡಳಿತ ಸುಧಾರಣೆ)ಗೆ ವರ್ಗಾಯಿಸಲಾಗಿದೆ.
ಜಲ ಸಂಪನ್ಮೂಲ ಇಲಾಖೆಯಲ್ಲಿರುವ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಹೆಚ್ಚುವರಿ ಸಮವರ್ತಿತ ಪ್ರಭಾರ ಜವಾಬ್ದಾರಿ ನೀಡಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಗೌರವ ಗುಪ್ತಾರನ್ನು ಬಿಬಿಎಂಪಿ ಆಯುಕ್ತರನ್ನಾಗಿ ನಿಯೋಜಿಸಿದ್ದು, ಕೈಗಾರಿಕೆ ವಾಣಿಜ್ಯ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯಾಗಿ ಸಮವರ್ತಿತ ಪ್ರಭಾರದಲ್ಲಿ ಮುಂದುವರಿಯಲಿದ್ದಾರೆ.
ಎಸಿಎಸ್ ಜಿ.ಕುಮಾರ್ ನಾಯಕ್ ಅವರನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯಾಗಿ ವರ್ಗಾಯಿಸಿದ್ದು, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯಲ್ಲಿ ಮುಂದುವರಿಸಲಾಗಿದೆ.
ಬಿಬಿಎಂಪಿ ಅಯುಕ್ತರಾಗಿದ್ದ ಎನ್.ಮಂಜುನಾಥ ಪ್ರಸಾದ್ ಅವರನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ. ಹಾಗೆಯೇ ವಿಪತ್ತು ನಿರ್ವಹಣೆ, ಭೂಮಿ, ಯುಪಿಒಆರ್ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ಕುಮಾರ್ ಪಾಂಡೆಯವರಿಗೆ ಹೆಚ್ಚುವರಿಯಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ(ಎಂಎಸ್ಎಂಇ ಮತ್ತು ಮಿನರಲ್ಸ್) ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ.
ಕೆಪಿಸಿ ಎಂಡಿ ವಿ.ಪೊನ್ನುರಾಜ್ ಅವರಿಗೆ ಸಮವರ್ತಿತ ಪ್ರಭಾರವಾಗಿ ಡಿಪಿಎಆರ್ (ಇಗೌರ್ನೆನ್ಸ್)ಗೆ ನಿಯೋಜಿಸಲಾಗಿದೆ.
ಉಳಿದಂತೆ, ಕಪಿಲ್ ಮೋಹನ್- ಮೂಲಸೌಕರ್ಯ ಅಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿ, ಸಿಂಧೂ ಬಿ. ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ, ಎಸ್.ಹೊನ್ನಾಂಬ- ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕಿ, ಬಿ.ಆರ್.ಮಮತಾ- ಹೆಚ್ಚುವರಿ ಯೋಜನಾ ನಿರ್ದೇಶಕಿ ಸಕಾಲ, ಎಚ್.ಎನ್.ಗೋಪಾಲಕೃಷ್ಣ- ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ಎಂಡಿ, ಹೆಚ್ಚುವರಿಯಾಗಿ ಐಟಿಬಿಟಿ ಇಲಾಖೆ ನಿರ್ದೇಶಕ, ಗಂಗಾಧರ ಸ್ವಾಮಿ- ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಎಂಡಿ, ಹೆಚ್ಚುವರಿಯಾಗಿ ಕೆಪಿಟಿಸಿಎಲ್ ಪ್ರಧಾನ ವ್ಯವಸ್ಥಾಪಕ, ವಿದ್ಯಾ ಕುಮಾರಿ- ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ, ಜಯವಿಭವ ಸ್ವಾಮಿ- ಚೆಸ್ಕಾಂ ಎಂಡಿ, ಹೆಚ್ಚುವರಿಯಾಗಿ ಶ್ರೀ ಮಲೇಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಜವಾಬ್ದಾರಿ ನೀಡಲಾಗಿದೆ.