

ನವದೆಹಲಿ: ಭಾರತೀಯ ವಾಯುಸೇನೆಯ ಬತ್ತಳಿಕೆಯಲ್ಲಿರುವ ಅತ್ಯಂತ ಪ್ರಬಲ ಅಸ್ತ್ರ ರಫೇಲ್ ಯುದ್ಧ ವಿಮಾಣ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಈ ಯುದ್ಧ ವಿಮಾನ ಭಾರತದ ಗಡಿ ಕಾಯಲು ಸನ್ನದ್ಧವಾಗಿದೆ.
ಪದೇಪದೆ ಗಡಿ ತಂಟೆ ತೆಗೆದು ಸಂಘರ್ಷಕ್ಕಿಳಿಯುತ್ತಿರುವ ಚೀನಾಗೆ ತಕ್ಕ ಪ್ರತ್ಯುತ್ತರ ನೀಡಲು ರಫೇಲ್ ಫೈಟರ್ ಜೆಟ್ಗಳನ್ನು ನಿಯೋಜಿಸಲಾಗುತ್ತಿದೆ. ಜುಲೈ 22 ರಂದು ನವದೆಹಲಿಯಲ್ಲಿ ನಡೆಯಲಿರುವ ಭಾರತೀಯ ವಾಯು ಸೇನೆಯ ಕಮಾಂಡರ್ಗಳ ಸಮಾವೇಶದಲ್ಲಿ ಈ ನಿರ್ಧಾರ ಹೊರಬೀಳಲಿದೆ ಎಂದು ಹೇಳಲಾಗಿದೆ.
ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳು ಜುಲೈ 27ರಂದು ಅಂಬಾಲಾ ವಾಯುನೆಲೆಗೆ ಆಗಮಿಸಲಿವೆ. ಈ ಮೊದಲು ನಿಗದಿಯಾಗಿದ್ದಂತೆ ಮೊದಲ ಹಂತದಲ್ಲಿ ನಾಲ್ಕು ರಫೇಲ್ ಜೆಟ್ಗಳು ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಆದರೆ, ಭಾರತದ ಕೋರಿಕೆ ಮೇರೆಗೆ ಫ್ರಾನ್ಸ್ ಈ ಯುದ್ಧ ವಿಮಾನಗಳ ನಿರ್ಮಾಣ ಪ್ರಕ್ರಿಯೆಗೆ ಭಾರಿ ವೇಗ ನೀಡಿದೆ.
ಯುದ್ಧ ವಿಮಾನ ಚಾಲನಾ ಹಾಗೂ ನಿರ್ವಹಣಾ ಸಿಬ್ಬಂದಿ ಕಳೆದ ಒಂದು ವರ್ಷದಿಂದ ಫ್ರಾನ್ಸ್ನಲ್ಲಿ ಸಂಪೂರ್ಣ ತರಬೇತಿ ಪಡೆದಿದ್ದಾರೆ. ಇದಲ್ಲದೇ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆಯೂ ತಿಳಿದಿದ್ದಾರೆ ಎಂದು ವಾಯುಸೇನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಫೇಲ್ ಯುದ್ಧ ವಿಮಾನಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಬಳಕೆಗೆ ಸನ್ನದ್ಧಗೊಳಿಸಲಾಗುವುದು. ಲಡಾಖ್ ಸೇರಿ ಭಾರತದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಸಜ್ಜಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಅತ್ಯಂತ ತಂಪಾದ ವಾತಾವರಣ ಹಾಗೂ ಅತಿ ಎತ್ತರದ ಪ್ರದೇಶದಲ್ಲೂ ಕಾರ್ಯಾಚರಣೆ ನಡೆಸಲು ರಫೇಲ್ ಯುದ್ಧ ವಿಮಾನಗಳು ಸಾಮರ್ಥ್ಯ ಹೊಂದಿವೆ.