

ಬೆಂಗಳೂರು: ಕರೊನಾ ಹಾವಳಿ ಇಲ್ಲಿದ್ದರೆ ಕ್ರೀಡಾಪ್ರೇಮಿಗಳು ಇಷ್ಟೊತ್ತಿಗೆ ಐಪಿಎಲ್ ಟೂರ್ನಿಯನ್ನು ಮುಗಿಸಿ ಪ್ರೊ ಕಬಡ್ಡಿ ಲೀಗ್ ವೀಕ್ಷಿಸಲು ಸಜ್ಜಾಗುತ್ತಿರಬೇಕಾಗಿತ್ತು. ಆದರೆ ಕರೊನಾ ಭೀತಿಯಿಂದಾಗಿ ಈ ವರ್ಷ ಪ್ರೊ ಕಬಡ್ಡಿ ಲೀಗ್ ಟೂರ್ನಿ ನಡೆಯುವುದೇ ಅನುಮಾನವೆನಿಸಿದೆ. ಕಬಡ್ಡಿ ಆಟಗಾರರೂ ಈಗ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲಾಗದೆ ಖಾಲಿ ಕುಳಿತಿದ್ದಾರೆ. ಈ ನಡುವೆ ಬೆಂಗಳೂರು ಬುಲ್ಸ್ ತಂಡದ ನಾಯಕ ರೋಹಿತ್ ಕುಮಾರ್ ಕಬಡ್ಡಿ ಆಟಗಾರನಾಗದೇ ಇರುತ್ತಿದ್ದರೆ ತಾನು ಏನಾಗುತ್ತಿದ್ದೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.
ಪ್ರೊ ಕಬಡ್ಡಿ ಲೀಗ್ ಆರನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದ ರೋಹಿತ್ಕುಮಾರ್, 2016ರ ಸೌತ್ ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತ ತಂಡದ ಭಾಗವೂ ಆಗಿದ್ದರು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಅಪಾರವಾಗಿ ಇಷ್ಟಪಡುವ ರೋಹಿತ್ ಕುಮಾರ್, ಕಬಡ್ಡಿ ಆಟಗಾರನಾಗದೇ ಹೋಗಿರುತ್ತಿದ್ದರೆ ತಾನು ನಟನಾಗಿರುತ್ತಿದ್ದೆ ಎಂದು ಇನ್ಸ್ಟಾಗ್ರಾಂ ಲೈವ್ ಚಾಟ್ ಶೋನಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬಿಸಿಸಿಐಗೆ ಜನರಲ್ ಮ್ಯಾನೇಜರ್ ಬೇಕಾಗಿದ್ದಾರೆ!
'ಬಾಲ್ಯದಲ್ಲಿ ನನಗೆ ಕ್ರೀಡೆಯ ಮೇಲೆ ಯಾವುದೇ ಆಸಕ್ತಿ ಇರಲಿಲ್ಲ. ಊರಿನಲ್ಲಿ ನನ್ನ ಹಿರಿಯರು ಕಬಡ್ಡಿ ಆಟ ಆಡುತ್ತಿದ್ದರು. ಒಂದು ದಿನ ನಾನು ರಾಕೇಶ್ ಕುಮಾರ್ ಮತ್ತು ಇತರರು ಕಬಡ್ಡಿ ಆಡುತ್ತಿರುವುದನ್ನು ನೋಡಿದೆ. ಅದರಿಂದ ಸ್ಫೂರ್ತಿಗೊಂಡು ಕಬಡ್ಡಿ ಆಟಗಾರನಾಗಲು ಬಯಸಿದೆ. ನನ್ನ ತಂದೆಯೂ ಕೆಲಕಾಲ ಕಬಡ್ಡಿ ಆಡಿದ್ದರು. ಆದರೆ ಬಳಿಕ ದೆಹಲಿ ಪೊಲೀಸ್ ಇಲಾಖೆ ಸೇರಿಕೊಂಡಿದ್ದರು. ಆದರೂ ಅವರಿಗೆ ಕಬಡ್ಡಿ ಮೇಲಿನ ಆಸಕ್ತಿ ಕಡಿಮೆಯಾಗಿರಲಿಲ್ಲ. ಹೀಗಾಗಿ ಊರಿನಲ್ಲಿ ಕಬಡ್ಡಿ ಪಂದ್ಯಗಳನ್ನು ನೋಡಲು ಹೋಗುವಾಗ ನನ್ನನ್ನೂ ಕರೆದೊಯ್ಯುತ್ತಿದ್ದರು' ಎಂದು ರೋಹಿತ್ ಕುಮಾರ್ ತಮಗೆ ಕಬಡ್ಡಿ ಆಟದ ಮೇಲೆ ಆಸಕ್ತಿ ಬೆಳೆದುದನ್ನು ವಿವರಿಸಿದ್ದಾರೆ.