

ತಮಿಳುನಾಡು: 'ಇಂದ್ರು ನೇತೃ ನಾಲೈ', 'ರಾತ್ಸಾಸನ್', 'ಎಫ್‌ಐಆರ್' ಮತ್ತು 'ಗಟ್ಟ ಕುಸ್ತಿ'ಯಂತಹ ವಿಭಿನ್ನ ಕಥಾಹಂದರವುಳ್ಳ ಚಲನಚಿತ್ರಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿ, ಅಪಾರ ಸಿನಿಪ್ರೇಕ್ಷಕರ ಮನಗೆದ್ದಿರುವ ತಮಿಳು ನಟ ವಿಷ್ಣು ವಿಶಾಲ್, ಸದ್ಯ ತಮ್ಮ ಮುಂದಿನ 'ಲಾಲ್ ಸಲಾಂ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಕಾಲಿವುಡ್ನ ಸೂಪರ್ಸ್ಟಾರ್ ರಜನಿಕಾಂತ್ ಅವರೊಂದಿಗೆ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ನಟ ನೀಡಿದ ಆ ಒಂದು ಹೇಳಿಕೆ ಸದ್ಯ ಕಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ನಟ, ತಮ್ಮ ಮುಂಬರುವ ಸಿನಿಮಾಗಳ ಕುರಿತು ಅನೇಕ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ನನ್ನ ಫಿಲ್ಮೋಗ್ರಫಿಯನ್ನು ಗಮನಿಸಿದರೆ, ಬಹುತೇಕ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿವೆ. ನಾನು ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇದೆ. ನನಗೆ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲ. ನಾಯಕನ ಪಾತ್ರದಲ್ಲಿ ನಟಿಸಲು ಇಷ್ಟು ವರ್ಷಗಳ ಕಾಲ ಶ್ರಮಪಟ್ಟಿದ್ದೀನಿ" ಎಂದಿದ್ದಾರೆ.
"ನಾನು ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಮುನ್ನ ಅದರ ಕುರಿತಂತೆ ನಿರ್ದಿಷ್ಟವಾಗಿ ನಿರ್ಧರಿಸಿ ತದನಂತರ ಒಪ್ಪಿಗೆ ಸೂಚಿಸುತ್ತೇನೆ. ನಾನು ನನ್ನ ನಿರ್ದೇಶಕರಿಗೆ ಕಥೆ, ಪಾತ್ರಗಳು ಮತ್ತು ಇತರ ವಿವರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇನೆ. ನಾನು ಸಾಧಾರಣ ಕಥೆಯ ಸಿನಿಮಾಗಳಲ್ಲಿ ನಟಿಸಲು ಇಷ್ಟವಿಲ್ಲ. ಕಾರಣ, ಪ್ರೇಕ್ಷಕರಿಗೆ ಒಳ್ಳೆಯ ಚಿತ್ರಗಳನ್ನು ಕೊಡಲು ಬಯಸುತ್ತೇನೆ" ಎಂದರು.
“'ಲಾಲ್ ಸಲಾಂಗೆ' ಹೌದು ಎಂದು ಹೇಳುವ ಮುನ್ನ, ನಾನು ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರಿಗೆ ಸಂಪೂರ್ಣ ನಿರೂಪಣೆಯನ್ನು ನೀಡುವಂತೆ ಕೋರಿದೆ. ನಾನು ಚಿತ್ರಕ್ಕೆ ಬರುವ ಮುಂಚೆಯೇ ರಜನಿ ಸರ್ ಚಿತ್ರದ ಭಾಗವಾಗಲು ಒಪ್ಪಿಕೊಂಡಿದ್ದರು. ಹಾಗಾಗಿ, ಲಾಲ್ ಸಲಾಂ ಚಿತ್ರದಲ್ಲಿ ನಟಿಸಲು ನಾನು ಮತ್ತಷ್ಟು ಉತ್ಸುಕನಾದೆ. ಚಿತ್ರದ ಅಂತಿಮ ಔಟ್‌ಪುಟ್‌ನಲ್ಲಿ ನನಗೆ ತುಂಬ ತೃಪ್ತಿ ಸಿಕ್ಕಿದೆ" ಎಂದು ವಿಶಾಲ್ ಹೇಳಿದ್ದಾರೆ,(ಏಜೆನ್ಸೀಸ್).