

ಬೆಂಗಳೂರು: ಸದ್ಯದಲ್ಲೇ ರಚನೆಯಾಗಲಿರುವ ರಾಜ್ಯ ಸಚಿವ ಸಂಪುಟಕ್ಕೆ ತಾವು ಸೇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ವಿಷಯ ತಿಳಿಸಿದ್ದೇನೆ. ನಾನು ಮಾಜಿ ಸಿಎಂ ಮತ್ತು ಹಿರಿಯ ಆಗಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಧಾರ ಎಂದು ಅವರು ಹೇಳಿದ್ದಾರೆ.
ನಾನು ಕೆಳಮಟ್ಟದಿಂದ ಬೆಳೆದು ಬಂದ ಒಬ್ಬ ಕಾರ್ಯಕರ್ತ. ಮೇಲ್ಮಟ್ಟದ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಪಕ್ಷವನ್ನು ಕಟ್ಟಿದ್ದೇನೆ. ಈ ಹಂತದಲ್ಲಿ ಸಚಿವನಾಗಲು ನಾನು ಒಪ್ಪುವುದಿಲ್ಲ. ಪಕ್ಷದ ಕೆಲಸವನ್ನು ಹೈಕಮಾಂಡ್ನವರು ಕೊಟ್ಟರೆ ಸಂತೋಷದಿಂದ ನಿರ್ವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಶೆಟ್ಟರ್ ಅವರ ಈ ನಿರ್ಧಾರದ ಕುರಿತು ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಅದು ನನ್ನ ಗಮನಕ್ಕೆ ಬಂದಿಲ್ಲ. ಸಚಿವ ಸಂಪುಟ ರಚನೆ ಕುರಿತು ಸದ್ಯದಲ್ಲೇ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠ ನಾಯಕರ ಜತೆ ಚರ್ಚಿಸುತ್ತೇನೆ ಎಂದಷ್ಟೇ ಹೇಳಿದರು.