

ಬೆಂಗಳೂರು: ‘ಪೊಗರು’ ನಂತರ ಧ್ರುವ ಸರ್ಜಾ ಅಭಿನಯದಲ್ಲಿ ನಂದಕಿಶೋರ್, ‘ದುಬಾರಿ’ ಎಂಬ ಚಿತ್ರ ನಿರ್ದೇಶಿಸಬೇಕಿತ್ತು. ಈಗ ಆ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದ್ದು, ಆ ಜಾಗದಲ್ಲಿ ಹಿರಿಯ ನಿರ್ವಪಕ ಕೆ. ಮಂಜು ಮಗ ಶ್ರೇಯಸ್ ಮಂಜು ಅಭಿನಯದಲ್ಲಿ ಇನ್ನೊಂದು ಹೊಸ ಚಿತ್ರವನ್ನು ಅವರು ನಿರ್ದೇಶಿಸುವುದಕ್ಕೆ ತಯಾರಿ ನಡೆಸಿದ್ದಾರೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಂದಕಿಶೋರ್, ‘ಶ್ರೇಯಸ್ ಜತೆಗೆ ಸಿನಿಮಾ ಮಾಡುತ್ತಿದ್ದೇನೆ. ಮುಂದಿನ 15 ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಗ್ರಾಂಡ್ ಮುಹೂರ್ತವೇನಿಲ್ಲ. ದೇವಸ್ಥಾನದಲ್ಲಿ ಸರಳ ಪೂಜೆ ಮಾಡಿ ಚಿತ್ರ ಶುರು ಮಾಡಲಿದ್ದೇವೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ. ಸಖತ್ ಎನರ್ಜಿಟಿಕ್ ಆಗಿರುತ್ತದೆ. ಶ್ರೇಯಸ್ಗೆ ನಾಯಕಿಯಾಗಿ ‘ಏಕ್ ಲವ್ ಯಾ’ ಚಿತ್ರದ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ. ಜತೆಗೆ ಒಂದಿಷ್ಟು ಹೊಸ ಪ್ರತಿಭೆಗಳನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದೇವೆ. ಸದ್ಯದಲ್ಲೇ ಆಡಿಷನ್ ಮಾಡಿ, ಒಂದಿಷ್ಟು ಹೊಸಬರನ್ನು ಆಯ್ಕೆ ಮಾಡಲಿದ್ದೇವೆ. ಅವರಲ್ಲಿ ಕೆಲವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎನ್ನುತ್ತಾರೆ ನಂದಕಿಶೋರ್.
ಈ ಚಿತ್ರವನ್ನು ಗುಜ್ಜಾಲ್ ಪುರುಷೋತ್ತಮ್ ನಿರ್ವಿುಸುತ್ತಿದ್ದಾರೆ. ಇದಕ್ಕೂ ಮುನ್ನ, ‘ಟಗರು’ ಚಿತ್ರಕ್ಕೆ ಸಹನಿರ್ವಪಕರಾಗಿದ್ದ ಅವರು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ವಪಕರಾಗುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಮಾಡಿದರೆ, ಧರ್ಮವಿಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಬರವಣಿಗೆಯಿಂದ ನಿಧಾನ ಈ ಚಿತ್ರದ ನಂತರ ‘ದುಬಾರಿ’ ಮತ್ತು ಶಿವರಾಜಕುಮಾರ್ ಅಭಿನಯದ ಹೊಸ ಚಿತ್ರವನ್ನು ಕೈಗೆತ್ತುಕೊಳ್ಳುತ್ತಾರಂತೆ ನಂದಕಿಶೋರ್.
‘ಆ ಎರಡೂ ಚಿತ್ರಗಳ ಬರವಣಿಗೆ ಕೆಲಸ ಇನ್ನೂ ಮುಗಿದಿಲ್ಲ: ಎರಡೂ ಚಿತ್ರಗಳ ಚಿತ್ರಕಥೆ ಮತ್ತು ಸಂಭಾಷಣೆ ಪೂರ್ತಿಯಾಗಬೇಕಿದೆ. ಅದಕ್ಕೆ ಇನ್ನೊಂದಿಷ್ಟು ಸಮಯವಿದೆ. ಅಷ್ಟರಲ್ಲಿ ಸುಮ್ಮನೆ ಕೂರುವ ಬದಲು ಈ ಚಿತ್ರ ಶುರು ಮಾಡುತ್ತಿದ್ದೇನೆ. ಹೇಗೂ ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಸಂಪೂರ್ಣವಾಗಿತ್ತು. ಅದೇ ಕಾರಣಕ್ಕೆ ಈ ಚಿತ್ರವನ್ನು ಮೊದಲು ಕೈಗೆತ್ತಿಕೊಂಡಿದ್ದೇನೆ. ಈ ಚಿತ್ರದ ಸಂಪೂರ್ಣ ಚಿತ್ರೀಕರಣ ಬೆಂಗಳೂರು ಸುತ್ತುಮುತ್ತ ನಡೆಯಲಿದೆ. ಈ ಚಿತ್ರವನ್ನು ಮೊದಲಿಗೆ ಮುಗಿಸಿ, ಆ ನಂತರ ಆ ಚಿತ್ರಗಳನ್ನು ಶುರು ಮಾಡುತ್ತೇನೆ’ ಎನ್ನುತ್ತಾರೆ ನಂದಕಿಶೋರ್.